ಬೆಂಗಳೂರು/ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಕ ರಾಜ್ಯಕ್ಕೆ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಏಪ್ರಿಲ್ 8 ರಂದು ಒಂದು ದಿನದ ಭೇಟಿಯ ವೇಳೆ ಪಕ್ಷ ಹಾಗು ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೇ ವಾಪಸಾಗುತ್ತಿರುವುದು ವಿಶೇಷವಾಗಿದೆ.
ಪ್ರಧಾನಿ ಕಾರ್ಯಕ್ರಮ ಹೀಗಿದೆ..: ಏಪ್ರಿಲ್ 8ರಂದು ಮೋದಿ ಚೆನ್ನೈನಿಂದ ಮೈಸೂರಿಗೆ ಆಗಮಿಸುವರು. ಮೈಸೂರು ವಿಮಾನ ನಿಲ್ದಾಣಕ್ಕೆ ರಾತ್ರಿ 8.45ಕ್ಕೆ ಆಗಮಿಸಲಿದ್ದು, ಖಾಸಗಿ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಏಪ್ರಿಲ್ 9ರಂದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಾಮರಾಜನಗರಕ್ಕೆ ಪ್ರಯಾಣಿಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದು, ಬಂಡೀಪುರ ಹುಲಿ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡುವರು. ಬೆಳಗ್ಗೆ 7.15 ರಿಂದ 9.30ರ ವರೆಗೂ ಅವರು ಸಫಾರಿ ನಡೆಸಲಿದ್ದಾರೆ. ಬೆಳಗ್ಗೆ 11ರಿಂದ 12 ಗಂಟೆಯವರೆಗೆ ಟೈಗರ್ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 50 ವರ್ಷಗಳ ಹುಲಿ ಯೋಜನೆ ಸ್ಮರಣಾರ್ಥ ನಡೆಯುವ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 12.50ಕ್ಕೆ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮೋದಿ ಭೇಟಿಯ ವೇಳೆ ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ. ಹೆಚ್ಚಿನ ಸಮಯಾವಕಾಶವೂ ಇಲ್ಲದ ಕಾರಣ ರಾಜ್ಯ ರಾಜಕೀಯ, ಚುನಾವಣೆ ಕುರಿತು ರಾಜ್ಯ ನಾಯಕರ ಜೊತೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ತಿಳಿದುಬಂದಿದೆ.
15 ಕಿ.ಮೀ ವನ್ಯಜೀವಿ ಸಫಾರಿ:ಏಪ್ರಿಲ್9 ರಂದು ಪ್ರಧಾನಿ ಮೋದಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ಕೊಡಲಿದ್ದು, ಬೆಳಗ್ಗೆ ಅರಣ್ಯ ಇಲಾಖೆ ಜೀಪ್‌ನಲ್ಲಿ ಸುಮಾರು 15 ಕಿ.ಮೀ ವನ್ಯಜೀವಿ ಸಫಾರಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಬಂಡೀಪುರದ ಬೋಳಗುಡ್ಡ ಎಂಬ ಕಳ್ಳಬೇಟೆ ತಡೆ ಶಿಬಿರಕ್ಕೆ ಪ್ರಧಾನಿ ಭೇಟಿ ನೀಡಲಿದ್ದು, ವಿಸ್ತಾರವಾದ ಅರಣ್ಯ ಪ್ರದೇಶ, ಸ್ವಚ್ಛಂದವಾಗಿ ವಿಹರಿಸುವ
ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಪ್ರಧಾನಿಗೆ ವಿಶೇಷ ಟೀ ವ್ಯವಸ್ಥೆ: ಬಂಡೀಪುರ ಭೇಟಿ ವೇಳೆ ದನ್ನಟ್ಟಿ ಹಳ್ಳ ಎಂಬ ಕ್ಯಾಂಪ್‌ನಲ್ಲಿ ಅರಣ್ಯ ವೀಕ್ಷಕರು, ವಿಶೇಷವಾಗಿ ಸೋಲಿಗರು ತಯಾರಿಸುವ ಕಪ್ಪು ಚಹಾ ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಲು ಹಾಕದಿರುವ ಅಂತರ್ಜಲ, ನಿಂಬೆ ಹುಲ್ಲು, ಬೆಲ್ಲ ಹಾಕಿ ಮಾಡುವ ಟೀಯನ್ನು ಮೋದಿ ಅವರಿಗೆ ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.