ಬೆಂಗಳೂರು :ರಾಜ್ಯದಲ್ಲಿರುವ ಎಲ್ಲಾ ಮನೆ ಕೆಲಸಗಾರರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ- 2008ರ ಅಡಿ ಕಡ್ಡಾಯವಾಗಿ ನೋಂದಾಯಿಸಿ ಅವರಿಗೆ ಕನಿಷ್ಠ ವೇತನ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ, ಹೈಕೋರ್ಟ್ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಧ್ಯಕ್ಷರು ಖುದ್ದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ.
ಈ ಸಂಬಂಧ ಮನೆ ಕೆಲಸಗಾರರ ಹಕ್ಕುಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಹಿಂದಿನ ವಿಚಾರಣೆ ವೇಳೆಯೇ ನೋಟಿಸ್ ಜಾರಿಯಾಗಿದ್ದರೂ ವಿಚಾರಣೆಗೂ ಹಾಜರಾಗದೆ ಮತ್ತು ನೋಟಿಸ್‌ಗೆ ಉತ್ತರವನ್ನೂ ಕೊಡದ ಮಂಡಳಿಯ ನಡೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಮಂಡಳಿಯ ಅಧ್ಯಕ್ಷರು ಮುಂದಿನ ವಿಚಾರಣಾ ದಿನಾಂಕದಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಖುದ್ದು ಹಾಜರಾಗಬೇಕು. ಒಂದೊಮ್ಮೆ ಗೈರು ಹಾಜರಾದರೆ ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಕೆ ನೀಡಿದೆ.
ಅರ್ಜಿದಾರರ ಕೋರಿಕೆ :ರಾಷ್ಟ್ರೀಯ ಮಾದರಿ ಸರ್ವೇ ಪ್ರಕಾರ ದೇಶದಲ್ಲಿ 39 ಲಕ್ಷ ಮನೆ ಕೆಲಸಗಾರಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 2020ರ ಮಾರ್ಚ್ 23ರಂದು ಬಹಿರಂಗಪಡಿಸಿದೆ. ಅದೇ ರೀತಿ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮನೆ ಕೆಲಸಗಾರರಿದ್ದಾರೆ. ಅವರನ್ನು ಗುರುತಿಸಲು ನಿಖರ ಸರ್ವೇ ನಡೆಸಿಲ್ಲ.
ಬೆಂಗಳೂರು ನಗರದಲ್ಲೇ ನಾಲ್ಕು ಲಕ್ಷಕ್ಕೂ ಅಧಿಕ ಮನೆ ಕೆಲಸಗಾರರು ಇದ್ದಾರೆ. ಅವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿ ನೋಂದಣಿ ಮಾಡಿಲ್ಲ. ಇದರಿಂದ ಮನೆ ಕೆಲಸಗಾರರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಶೋಷಣೆ, ಲೈಂಗಿಕ ದೌರ್ಜನ್ಯ ಮತ್ತು ತಾರತಮ್ಯದಿಂದ ರಕ್ಷಣೆ ಇಲ್ಲದಂತಾಗಿದೆ.
ಆದ್ದರಿಂದ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲಾ ಮನೆ ಕೆಲಸಗಾರರನ್ನು ಕಾಯ್ದೆಯಡಿ ನೋಂದಣಿ ಮಾಡಿ, ಸೂಕ್ತ ಸೌಲಭ್ಯ ಒದಸಗಿಸಬೇಕು. ಅವರಿಗೆ ಕನಿಷ್ಠ ವೇತನ ಕಲ್ಪಿಸಿಕೊಡಬೇಕು.
ತಾರತಮ್ಯ, ಲೈಂಗಿಕ ದೌರ್ಜನ್ಯ, ಶೋಷಣೆ ಮತ್ತು ಒತ್ತಾಯಪೂರ್ವಕವಾಗಿ ಮನೆ ಕೆಲಸ ಮಾಡಿಸುವುದರಿಂದ ರಕ್ಷಣೆ ಕಲ್ಪಿಸಬೇಕು. ಕಾಯ್ದೆ ಕುರಿತು ವ್ಯಾಪಕ ಪ್ರಚಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.