ಬೆಂಗಳೂರು: ಮುಸ್ಲಿಂ ಸಮದಾಯದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿ ಮೊಹಮ್ಮದ್ ಖಲೀವುಲ್ಲಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಪೀಠ, ಪ್ರಕರಣದಲ್ಲಿ ಅರ್ಜಿದಾರರ ಹಿತಾಸಕ್ತಿ ಏನಿದೆ?, ಈ ಪ್ರಕರಣದಿಂದ ಅರ್ಜಿದಾರರು ಯಾವ ರೀತಿ ತೊಂದರೆಗೆ ಒಳಗಾಗಿದ್ದಾರೆ? ಎಂಬ ಕುರಿತು ಸ್ಪಷ್ಟನೆ ಕೇಳಿ ಕಚೇರಿ ಆಕ್ಷೇಪಣೆ ಎತ್ತಿದೆ. ಅದನ್ನು ಪರಿಹರಿಸಿ ಎಂದು ಅರ್ಜಿದಾರರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಆರೋಪ : ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಕೆಲ ಬಿಜೆಪಿ ಮುಖಂಡರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇಪದೆ ಪ್ರಚೋದನಾಕಾರಿ ಮತ್ತು ದ್ವೇಷಪೂರಿತ ಭಾಷಣ ಮಾಡುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ತಾರತಮ್ಯ, ಕೋಮುದ್ವೇಷ ಮತ್ತು ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಹಾಗೆಯೇ, ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಕೆ.ಎಸ್. ಈಶ್ವರಪ್ಪ, ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ಸಿ.ಟಿ.ರವಿ, ತೇಜಸ್ವಿಸೂರ್ಯ, ಪ್ರತಾಪ್ ಸಿಂಹ, ರಿಷಿಕುಮಾರ್ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಮತ್ತು ಪ್ರಮೋದ್ ಮುತಾಲಿಕ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ:ಮಗಳ ಮೇಲೆ ಅತ್ಯಾಚಾರ: ಅಪರಾಧಿ ತಂದೆಗೆ 20 ವರ್ಷ ಜೈಲು ಶಿಕ್ಷೆ, ದಂಡ