ಬೆಂಗಳೂರು:ಕಾಂಗ್ರೆಸ್ ಪಕ್ಷ ಜನರ ನಿಜವಾದ ಸಮಸ್ಯೆಯ ನಿವಾರಣೆಗೆ ಶ್ರಮಿಸುತ್ತದೆ. ಬಿಜೆಪಿಯಂತೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕಾರ್ಯ ಮಾಡುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭೆ ಸದಸ್ಯ ಪಿ. ಚಿದಂಬರಂ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ಕಾಂಗ್ರೆಸ್ ಪ್ರಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ. ಕಾಂಗ್ರೆಸ್ ಜನರ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದೆ. ಆದರೆ, ಇಂದು ಜನರ ಸಮಸ್ಯೆಗಳ ಚರ್ಚೆಯ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಹಾಲಿ ರಾಜ್ಯ ಸರ್ಕಾರ ಜನ ಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಕುದುರೆ ವ್ಯಾಪಾರದಿಂದ ಸರ್ಕಾರ ರಚನೆ ಮಾಡಲಾಗಿದೆ" ಎಂದು ಆರೋಪಿಸಿದರು.
ಈ ಕಾರಣಕ್ಕಾಗಿ ಸರ್ಕಾರದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಇದೆ. ರಾಜ್ಯ ಸರ್ಕಾರದ ವಿರುದ್ಧ ಇರುವ 40 ಪರ್ಸೆಂಟ್ ಕಮಿಷನ್ ಆರೋಪ ದೇಶದ ಗಮನ ಸೆಳೆಯುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಆರ್ಥಿಕತೆಯ ಭರವಸೆ ಈಡೇರಿಸಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ಹೊರಟಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯ ಇಲ್ಲ. ವಿದ್ಯಾರ್ಥಿ ವೇತನವೂ ಸಿಗುತ್ತಿಲ್ಲ. ರಾಜ್ಯದಲ್ಲಿ ಮತೀಯ ಆಧಾರದಲ್ಲಿ ಜನರನ್ನು ಸಂಘ ಪರಿವಾರ ವಿಭಜನೆ ಮಾಡುತ್ತಿದೆ. ಹಿಜಾಬ್ ಹಲಾಲ್, ಮತಾಂತರ ನಿಷೇಧ ಕಾಯ್ದೆ ಮೂಲಕ ಜನರ ನಡುವೆ ಗೊಂದಲ ಸೃಷ್ಟಿಯಾಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ 85 ಪರ್ಸೆಂಟ್ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು "ಮೋದಿ ಭಾರತ ಅಭಿವೃದ್ಧಿ ಆಗಿದ್ದೆ 2014ರ ಬಳಿಕ ಅನ್ನೋ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗ ನಡೆಯುತ್ತಿರುವುದು ಕರ್ನಾಟಕದ ರಾಜ್ಯದ ಚುನಾವಣೆ. ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದಾರೆ. ಮೊದಲು ಕೆಂಪಣ್ಣ ಪತ್ರಕ್ಕೆ ಉತ್ತರ ಕೊಡಲಿ. ಅದು ಬಿಟ್ಟು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೋದಿ ಅವರ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ" ಎಂದು ಹೇಳಿದರು.