ಕರ್ನಾಟಕ

karnataka

ETV Bharat / state

ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳುವುದೇ ಬಿಜೆಪಿ: ಬೆಂಗಳೂರು ಉತ್ತರ ಕ್ಷೇತ್ರಾವಲೋಕನ

ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದ್ದ ಬೆಂಗಳೂರು ಉತ್ತರ ಕ್ಷೇತ್ರ ಕೊನೇ ಕ್ಷಣದಲ್ಲಿ ಕಾಂಗ್ರೆಸ್​ ಪಾಲಾಗಿದ್ದು, ಇಲ್ಲಿಯವರೆಗೆ ಕೈ ಅಭ್ಯರ್ಥಿ ಯಾರೆಂದು ಘೋಷಣೆಯಾಗಿಲ್ಲ. ಸದ್ಯ ಬಿಜೆಪಿ ತೆಕ್ಕೆಯಲ್ಲಿರುವ ಬೆಂಗಳೂರು ಉತ್ತರ ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಕುತೂಹಲ ಮನೆಮಾಡಿದೆ.

By

Published : Mar 26, 2019, 4:05 AM IST

ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳುವುದೇ ಬಿಜೆಪಿ

ಬೆಂಗಳೂರು :ದಶಕಗಳಿಂದಲೂ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 2004 ರಿಂದ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ನ ಹಿರಿಯ ರಾಜಕಾರಣಿಯಾಗಿದ್ದ ದಿ. ಸಿ.ಕೆ. ಜಾಫರ್​ ಶರೀಫ್​ ಸತತವಾಗಿ ಗೆದ್ದು ಬಂದು ಈ ಕ್ಷೇತ್ರವನ್ನು ಕಾಂಗ್ರೆಸ್​ನ ಭದ್ರ ಕೋಟೆಯನ್ನಾಗಿ ಮಾಡಿದ್ದರು. ಆದರೆ 2004ರಲ್ಲಿ ಕಾಂಗ್ರೆಸ್​ನ ಭದ್ರಕೋಟೆಯನ್ನು ಬಿಜೆಪಿ ಭೇದಿಸಿತ್ತು. 2004 ರಲ್ಲಿ ಡಿ.ವಿ. ಸದಾನಂದಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್​ನ ಸಿ.ನಾರಾಯಣ ಸ್ವಾಮಿ ಅವರನ್ನು ಸೋಲಿಸಿದರು. ಇದಾದ ನಂತರ ಸತತವಾಗಿ ಈ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ.

2004ರ ನಂತರ ಬಿಜೆಪಿಯಿಂದ ಸದಾನಂದಗೌಡ ಎರಡು ಬಾರಿ ಮತ್ತು ಡಿ.ಬಿ. ಚಂದ್ರೇಗೌಡ ಒಂದು ಬಾರಿ ಗೆಲುವು ಸಾಧಿಸಿದ್ದಾರೆ. ಸಿ. ನಾರಾಯಣಸ್ವಾಮಿ ಅವರು ಎರಡು ಬಾರಿ ಸೋತಿದ್ದರೆ, ಸಿ.ಕೆ. ಜಾಫರ್​ ಶರೀಫ್​ ಒಂದು ಬಾರಿ ಸೋತಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚು ಎಂದು ಹೇಳಲಾಗುತ್ತಿದೆ.

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಬ್ಯಾಟರಾಯನಪುರ, ಹೆಬ್ಬಾಳ, ಕೆ.ಆರ್. ಪುರ, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್​, ಪುಲಿಕೇಶಿನಗರ (ಮೀಸಲು), ಯಶವಂತಪುರ ಹಾಗೂ ಮಲ್ಲೇಶ್ವರಂ. ಐದು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದು, ಒಂದು ಕ್ಷೇತ್ರ ಬಿಜೆಪಿ ಹಾಗೂ ಎರಡು ಕ್ಷೇತ್ರ ಜೆಡಿಎಸ್ ಕೈಯಲ್ಲಿವೆ.

ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳುವುದೇ ಬಿಜೆಪಿ

ಜಾತಿವಾರು ಲೆಕ್ಕಾಚಾರ? :

ಕುರುಬ, ಪರಿಶಿಷ್ಟ ಜಾತಿ ಸೇರಿದಂತೆ ಇತರ ಜಾತಿಗಳ ಸುಮಾರು 6 ಲಕ್ಷ ಮತಗಳಿವೆ ಎನ್ನಲಾಗುತ್ತಿದೆ. ಅದೇ ರೀತಿ ಒಕ್ಕಲಿಗ ಸಮುದಾಯದ ಮತಗಳು ಸುಮಾರು 7 ಲಕ್ಷದಷ್ಟಿವೆ ಎಂದು ಅಂದಾಜಿಸಲಾಗಿದೆ. ಮುಸ್ಲಿಂ ಸಮುದಾಯದ ಸುಮಾರು 5 ಲಕ್ಷ ಮತಗಳಿವೆ. ಆದರೆ ಸರಿಯಾದ ಜಾತಿ ಲೆಕ್ಕಾಚಾರ ಎಲ್ಲಿಯೂ ಲಭ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ, ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಮತಗಳೇ ಉತ್ತರ ಕ್ಷೇತ್ರದ ಫಲಿತಾಂಶವನ್ನು ನಿರ್ಧರಿಸುತ್ತವೆ.

ಈ ಕ್ಷೇತ್ರದಲ್ಲಿ 24,01,472 ಮತದಾರರಿದ್ದು, ಇದರಲ್ಲಿ ಶೇ. 52.48 ರಷ್ಟು ಪುರುಷ ಮತದಾರರಿದ್ದರೆ, ಶೇ. 47. 67 ರಷ್ಟು ಮಹಿಳೆಯರಿದ್ದಾರೆ. ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ 13,57,553 ಮತದಾರರು ಮತವನ್ನು ಚಲಾಯಿಸಿದ್ದು, ಶೇ. 56.53ರಷ್ಟು ಮತದಾನವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಡಿ.ವಿ. ಸದಾನಂದಗೌಡರು 7,18,326 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ನ ಸಿ. ನಾರಾಯಣಸ್ವಾಮಿ ಅವರು 4,88, 562 ಮತ ಪಡೆದಿದ್ದರು.

ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ಜೆಡಿಎಸ್ ವರಿಷ್ಠರು ಈ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಟ್ಟರು.

ವಿಧಾನಸಭಾ ಕ್ಷೇತ್ರಗಳ ವಿಶೇಷತೆ ಏನು?
ಬ್ಯಾಟರಾಯನಪುರ: ಕಾಂಗ್ರೆಸ್​ನ ಪ್ರಭಾವಿ ನಾಯಕ ಕೃಷ್ಣ ಭೈರೇಗೌಡ ಇಲ್ಲಿನ ಶಾಸಕರು. ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಗ್ರಾಮೀಣಾಭಿವದ್ಧಿ ಸಚಿವರಾಗಿರುವ ಕೃಷ್ಣಬೈರೇಗೌಡ, ಈ ಹಿಂದಿನ ಕಾಂಗ್ರೆಸ್​ ಸರ್ಕಾರದಲ್ಲೂ ಕೃಷಿ ಸಚಿವರಾಗಿದ್ದರು.ವಲಸಿಗರ ಪ್ರಾಬಲ್ಯದ ಜೊತೆಮಧ್ಯಮ ಹಾಗೂ ಬಡ ಕೂಲಿ ಕಾರ್ಮಿಕರು ಈ ಕ್ಷೇತ್ರದ ನಿರ್ಣಯಕ ಮತದಾರರು. ಸಾಕ್ಷರತೆ ಪ್ರಮಾಣ ಕೂಡ ಅಧಿಕ ಮಟ್ಟದಲ್ಲಿರುವ ಈ ಕ್ಷೇತ್ರಗಳಲ್ಲಿ ಜನಪರ ಕೆಲಸ ಜೊತೆ ಪಕ್ಷದ ವರ್ಚಸ್ಸು ಕೂಡ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಹೆಬ್ಬಾಳ:ಕಾಂಗ್ರೆಸ್​ನ ಭೈರತಿ ಸುರೇಶ್​ ಇಲ್ಲಿನ ಶಾಸಕರು. ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಸಹ ಕೈ ವಶದಲ್ಲಿದೆ. ಇಲ್ಲಿ ವಲಸಿಗರು ಹೆಚ್ಚು, ಜೊತೆಗೆ ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರು ಈ ಕ್ಷೇತ್ರದಲ್ಲಿದ್ದಾರೆ. ಏರ್ ಪೋರ್ಟ್ ರಸ್ತೆಯಾಗಿರುವುದರಿಂದ ವಾಹನದಟ್ಟಣೆ ಅಧಿಕ. ಕುಡಿಯುವ ನೀರಿಗೂ ಈ ಪ್ರದೇಶದಲ್ಲಿ ಸಮಸ್ಯೆ ಹೆಚ್ಚು.

ಕೆ.ಆರ್. ಪುರ :ಕಾಂಗ್ರೆಸ್​ನ ಭೈರತಿ ಬಸವಾರಾಜು ಈ ಕ್ಷೇತ್ರದ ಶಾಸಕರಾಗಿದ್ದು, ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ರಿಯಲ್​ ಎಸ್ಟೇಟ್​ ಈ ಕ್ಷೇತ್ರದ ಪ್ರಮುಖ ಉದ್ಯಮ ಎಂದರೂ ತಪ್ಪಾಗಲಾರದು. ಜತೆಗೆ ಹಲವು ಸಾಫ್ಟ್​ವೇರ್​ ಸಂಸ್ಥೆಗಳು, ಗಾರ್ಮೆಂಟ್ಸ್, ಇಟ್ಟಿಗೆ ಕಾರ್ಖಾನೆಗಳು ಈ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯಮವನ್ನು ಸೃಷ್ಟಿಸಿದೆ.

ದಾಸರಹಳ್ಳಿ: ಜೆಡಿಎಸ್​ನ ಆರ್​. ಮಂಜುನಾಥ್​ ಈ ಕ್ಷೇತ್ರದ ಶಾಸಕರು. ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ವಲಸಿಗ ಬಡಹಾಗೂ ಮಧ್ಯಮ ವರ್ಗದ ಮತದಾರರು ಹೆಚ್ಚಿದ್ದು, ಒಕ್ಕಲಿಗ ಮತ ಹೆಚ್ಚಿನ ಪ್ರಾಧಾನ್ಯತೆ ಹೊಂದಿದೆ.

ಯಶವಂತಪುರ: ಕಾಂಗ್ರೆಸ್​ನ ಎಸ್​.ಟಿ ಸೋಮಶೇಖರ್​ ಇಲ್ಲಿನ ಶಾಸಕರು. ಶೋಭಾ ಕರಂದ್ಲಾಜೆ ಈ ಹಿಂದೆ ವಿಧಾನಸಭೆಯಲ್ಲಿ ಸ್ಪರ್ಧಿಸಿದ್ದ ಈ ಕ್ಷೇತ್ರ ನಂತರ ಕಾಂಗ್ರೆಸ್​ ತೆಕ್ಕೆಗೆ ಸೇರಿತು.

ಮಲ್ಲೇಶ್ವರಂ :ಬಿಜೆಪಿ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದ ಶಾಸಕರು ಡಾ. ಅಶ್ವತ್​ ನಾರಾಯಣ್. ಅಶ್ವತ್​ ನಾರಾಯಣ್​ ಆರ್​ಎಸ್​ಎಸ್​ನ ಕಟ್ಟಾಳು ಮತ್ತು ಬಿಜೆಪಿ ಹೈಕಮಾಂಡ್​ ಜತೆಗೆ ಉತ್ತಮ ಸಂಪರ್ಕ ಹೊಂದಿರುವ ಯುವ ನಾಯಕ. ಇಲ್ಲಿ ಮಧ್ಯಮ ಹಾಗೂ ಶ್ರೀಮಂತ ವರ್ಗ ಹೆಚ್ಚು ಕಾಣಬಹುದು.

ಮಹಾಲಕ್ಷ್ಮಿ ಲೇಔಟ್​:ಜೆಡಿಎಸ್​ನ ಕೆ.ಗೋಪಾಲಯ್ಯ ಇಲ್ಲಿನ ಶಾಸಕರು. ಕಾಂಗ್ರೆಸ್​ ಬಿಜೆಪಿ ಜಿದ್ದಾಜಿದ್ದಿನ ಕಣವಾದ ಇಲ್ಲಿ ನೆ.ಲ.ನರೇಂದ್ರಬಾಬು ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರಿದ್ದು, ಕಾಂಗ್ರೆಸ್​ಗೆ ನಷ್ಟವಾಯಿತು.

ಪುಲಕೇಶಿ ನಗರ (ಮೀಸಲು):ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ್ದ ಅಂಖಡ ಶ್ರೀನಿವಾಸ್​ ಮೂರ್ತಿ ಇಲ್ಲಿನ ಶಾಸಕರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಇದು ಜೆಡಿಎಸ್​ ಕಾಂಗ್ರೆಸ್​ ನಡುವಿನ ಪೈಪೋಟಿಗೆ ಹಲವು ಬಾರಿ ಸಾಕ್ಷಿಯಾದ ಕ್ಷೇತ್ರ. ಕೂಲಿ ಕಾರ್ಮಿಕರು ಹಾಗೂ ಮುಸ್ಲೀಂ ಸಮುದಾಯದವರು ಹೆಚ್ಚು ಈ ಭಾಗದಲ್ಲಿ ನೆಲೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details