ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಜೊತೆ ಹೋದರೆ ದೇಶ, ಧರ್ಮ ಸುಭದ್ರವಾಗಿರುತ್ತದೆ. ನಾವೆಲ್ಲಾ ಅಭಿವೃದ್ಧಿ ಪಥದಲ್ಲಿ ಸಾಗುತ್ತೇವೆ. ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ ಎಂದು ದೆಹಲಿ ಕೈ ನಾಯಕರೇ ಹೇಳುತ್ತಿದ್ದಾರೆ. ಇಲ್ಲಿ ಮಾತ್ರ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡಿ ವಿಜೃಂಭಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಸುವರ್ಣಸೌಧದಲ್ಲಿಂದು ಮಾತನಾಡಿದ ಅವರು, "ಮೂರು ರಾಜ್ಯದಲ್ಲಿ ಸೋತಿರುವ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಿಲ್ಲ. ತೆಲಂಗಾಣದಲ್ಲಿ ಗೆದ್ದಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ. ತೆಲಂಗಾಣದಲ್ಲಿ ಬಿಆರ್‌ಎಸ್ ಪಾರ್ಟಿ ವಿರುದ್ಧ ಇದ್ದು ರೆಸಾರ್ಟ್ನಲ್ಲಿ ರಾಜಕಾರಣ ಮಾಡ್ತಿದ್ದರು. ಹೀಗಾಗಿ, ಕಾಂಗ್ರೆಸ್ ಅಲ್ಲಿ ಗೆದ್ದಿದೆ" ಎಂದರು.
"ಈ ದೇಶಕ್ಕೆ ಮೋದಿ ಅನಿವಾರ್ಯ ಎಂದು ಜನರಿಗೆ ಗೊತ್ತಾಗಿದೆ. ಮೋದಿ ಇದ್ದರೆ ಮಾತ್ರ ದೇಶ ವಿಕಾಸ ಆಗುತ್ತದೆ. ಈ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಶೋಕದಲ್ಲಿದೆ. ಇನ್ನೇನಿದ್ದರೂ ಮೋದಿ ಕಾಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಭಾರತ ವಿಶ್ವ ಗುರುವಾಗಿ ಅಭಿವೃದ್ಧಿ ಪಥ ಕಾಣಲಿದೆ" ಎಂದು ಹೇಳಿದರು.
ನಿನ್ನೆ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಈ ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿ ಸ್ವೀಪ್ ಆಗಲಿದೆ. ಎಲ್ಲ ಕಡೆಗಳಲ್ಲೂ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಂಡಿದೆ. ಪ್ರಧಾನಿ ಮೋದಿ ಅವರ ಪ್ರಭಾವ ಎಲ್ಲ ಕಡೆಗಳಲ್ಲಿಯೂ ಕಾಣಿಸುತ್ತಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ :ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ : ಪ್ರತಿಪಕ್ಷ ನಾಯಕ ಆರ್ ಅಶೋಕ್
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ಮೋದಿ ಅವರ ನಾಯಕತ್ವ ಮತ್ತು ಬಿಜೆಪಿಯ ಅಭಿವೃದ್ಧಿ ರಾಜಕಾರಣ ಪರವಾದ ಸುಸ್ಪಷ್ಟ ಜನಾದೇಶವಾಗಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಪಕ್ಷಕ್ಕೆ ಜನತೆ ಆಶೀರ್ವದಿಸಿದ್ದು, ವಿಪಕ್ಷಗಳ ಅಪಪ್ರಚಾರವನ್ನು ಮೀರಿ, ಸುಶಾಸನ ಮತ್ತು ಅಭಿವೃದ್ಧಿಗೆ ದೊರೆತ ಮನ್ನಣೆಯಾಗಿದೆ. ಈ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರತದ ಪ್ರಧಾನಿ ಆಗುವದು ಸುನಿಶ್ಚಿತ. ಈ ಐತಿಹಾಸಿಕ ಗೆಲುವಿಗಾಗಿ ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಸೇರಿದಂತೆ ಪಕ್ಷದ ಎಲ್ಲ ನಾಯಕರಿಗೂ, ಎಲ್ಲ ನಮ್ಮ ಕಾರ್ಯಕರ್ತರಿಗೂ ಹೃತ್ಪೂರ್ವಕ ಅಭಿನಂದನೆಗಳು. "ಭಾರತ್ ಜೋಡೋ ಯಾತ್ರೆ ಹಾದು ಹೋದಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಮಾಯವಾಗಿದೆ. ಕಾಂಗ್ರೆಸ್ ಪಕ್ಷದ ಪನೌತಿ ಯಾರೆಂದು ಬಟಾ ಬಯಲಾಗಿದೆ. ಸನಾತನ ಧರ್ಮದ ವಿರುದ್ಧ ಸಮರ ಸಾರಿದವರ ಸದ್ದಡಗಿದೆ. ಮೋದಿ ಮತ್ತೊಮ್ಮೆ ಎನ್ನುವ ಕೂಗು ದೇಶದೆಲ್ಲೆಡೆ ಮೊಳಗುತ್ತಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ :ಬಿಜೆಪಿ ನನ್ನ ಹೇಳಿಕೆ ತಿರುಚಿ ದೇಶವೇ ಮಾತನಾಡುವ ಹಾಗೆ ಮಾಡಿತು: ಉದಯನಿಧಿ ಸ್ಟಾಲಿನ್