ಬೆಂಗಳೂರು:2022-23ನೇ ಸಾಲಿನ ರಾಜ್ಯ ಬಜೆಟ್ನಲ್ಲಿಯೂ ವಕೀಲರಿಗೆ ಆರೋಗ್ಯ ಮತ್ತು ಜೀವ ವಿಮೆ ನೀಡದಿರುವುದು ವಕೀಲ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ ನಂತರವೂ ನಿರೀಕ್ಷೆಗಳು ಹುಸಿಯಾಗಿರುವುದಕ್ಕೆ ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ ರಂಗನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ವಕೀಲ ಸಮುದಾಯಕ್ಕೆ ಜೀವ ವಿಮೆ, ಆರೋಗ್ಯ ವಿಮೆ ಕಲ್ಪಿಸುವಂತೆ ಹೈಕೋರ್ಟ್ ಕೂಡ ಸೂಚಿಸಿತ್ತು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಹೇಳಿದ್ದರು. ಆದರೆ, ನಿರೀಕ್ಷೆಗಳು ಹಾಗೆಯೇ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಎಎಬಿ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಈ ಬಾರಿಯ ಬಜೆಟ್ ವಕೀಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ರಾಜ್ಯ ಹೈಕೋರ್ಟ್ ವಕೀಲರಿಗೆ ಆರೋಗ್ಯ ಮತ್ತು ಜೀವ ವಿಮೆ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಬೆಂಗಳೂರು ವಕೀಲರ ಸಂಘ ಕೂಡ ಮುಖ್ಯಮಂತ್ರಿ ಬಳಿ ಹಲವು ಬಾರಿ ವಕೀಲರ ಜೀವ ವಿಮೆ ಸೌಲಭ್ಯ ಕೋರಿ ಮನವಿ ಸಲ್ಲಿಸಿತ್ತು. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿಎಂ ಬೊಮ್ಮಾಯಿ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ಸಮ್ಮುಖದಲ್ಲಿಯೂ ಈ ವರ್ಷ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದರು.
ಆದರೆ, ಇಂದಿನಬಜೆಟ್‌ನಲ್ಲಿ ಕೇವಲ ವಕೀಲರ ವಿಮೆಯ ಸೌಲಭ್ಯಕ್ಕೆ ಮೂಲ ನಿಧಿ (ಕಾರ್ಪಸ್ ಫಂಡ್) ಇಡುವುದಾಗಿ ಮಾತ್ರ ಹೇಳಿದ್ದಾರೆ. ವಕೀಲರ ಆರೋಗ್ಯ ಮತ್ತು ಜೀವ ವಿಮೆಗೆ ಎಷ್ಟು ಮೂಲ ನಿಧಿ ಇಡುತ್ತಾರೆಂಬ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿಲ್ಲ. ಯುವ ವಕೀಲರ ಸ್ಟೈಫಂಡ್ ಅನ್ನು 2000 ರೂಪಾಯಿಯಿಂದ 5000 ರೂಪಾಯಿಗೆ ಹೆಚ್ಚುಸುವ ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಈ ವರ್ಷವೇ ಜಾರಿಗೆ ತರುವ ಭರವಸೆಗಳನ್ನೂ ಕೂಡ ಸಿಎಂ ಕಡೆಗಣಿಸಿದ್ದಾರೆ. ಬಜೆಟ್‌ನಲ್ಲಿ ನ್ಯಾಯಾಂಗ ಇಲಾಖೆಯನ್ನು ಸಂಪೂರ್ಣವಾಗಿ ಮರೆತಿರುವುದು ಬೇಸರದ ಸಂಗತಿ ಎಂದು ಎ.ಪಿ ರಂಗನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಆಡಳಿತ ಸುಧಾರಣೆಗೆ 56 ಸಾವಿರ ಕೋಟಿ ಅನುದಾನ: ಎಲ್ಲೆಲ್ಲಿ ಎಷ್ಟು ವಿನಿಯೋಗ?