ಕರ್ನಾಟಕ

karnataka

ETV Bharat / state

ರಾಜಕಾಲುವೆಗಳ ಕಸ ತೆರವುಗೊಳಿಸಲು ಪಾಲಿಕೆಯಿಂದ ಹೊಸ ಪ್ಲಾನ್​​

ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಬಿಬಿಎಂಪಿ ಇದೀಗ ಪರಿಹಾರ ಹುಡುಕಲು ಸಜ್ಜಾಗಿದೆ. ಮಳೆ ಬಂದರೆ ಕೆರೆಯಂತಾಗುವ ತಗ್ಗು ಪ್ರದೇಶಗಳಲ್ಲಿ ಟ್ರಾಶ್​ ಬ್ಯಾರಿಯರ್​ಗಳನ್ನು ಅಳವಡಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಡೆಯುತ್ತಿದೆ.

By

Published : Apr 24, 2019, 9:33 PM IST

ಟ್ರಾಶ್​ ಬ್ಯಾರಿಯರ್​ಗಳ ಅಳವಡಿಕೆ

ಬೆಂಗಳೂರು: ಮಳೆಗಾಲ ಎದುರಾಗುತ್ತಿದ್ದು, ಬೆಂಗಳೂರಿನ ರಾಜಕಾಲುವೆಯ ಹೂಳು, ಕಸದ ಸಮಸ್ಯೆಯನ್ನ ಬಗೆಹರಿಸಲು ಪಾಲಿಕೆಯು ಹೊಸ ಪ್ಲಾನ್​ ಮಾಡಿದೆ.

ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದ ಕಸವನ್ನು ತೆರವುಗೊಳಿಸಲು ಬಿಬಿಎಂಪಿ ಈ ಯೋಜನೆ ರೂಪಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಮೂರುಕಡೆಗಳಲ್ಲಿ ಟ್ರಾಶ್​ ಬ್ಯಾರಿಯರ್​ಗಳನ್ನು​ (ಕಸ ತಡೆಯುವ ಹಗುರ ಅಲ್ಯೂಮಿನಿಯಂ ಬಲೆ) ಅಳವಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ, ಹೂಳು ತುಂಬಿರುವುದು ಹಾಗೂ ಶೇಖರಣೆಯಾದ ಪ್ಲಾಸ್ಟಿಕ್​, ತ್ಯಾಜ್ಯ ತೆರವುಗೊಳಿಸದೇ ಇರುವ ಪರಿಣಾಮ ಮಳೆಗಾಲದಲ್ಲಿ ಹಲವು ಪ್ರದೇಶಗಳು ಕೆರೆಯಂತಾಗುತ್ತಿವೆ. ಜತೆಗೆ ರಾಜಕಾಲುವೆಗಳ ಪಕ್ಕದಲ್ಲಿರುವ ಮನೆಗಳ ಗೋಡೆಗಳು ಸಹ ಕುಸಿದು ಅವಘಡ ಸಂಭವಿಸಿರುವ ಸಾಕಷ್ಟು ಉದಾಹರಣೆಗಳಿವೆ.

ಆದ್ದರಿಂದ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಬಿಬಿಎಂಪಿ ಹೊಸ ಯೋಜನೆ ಜಾರಿ ತಂದಿದೆ. ರಾಜಕಾಲುವೆಯಲ್ಲಿ ಶೇಖರಣೆಗೊಳ್ಳುವ ಕಸವನ್ನು ತೆರವುಗೊಳಿಸಲು ಟ್ರಾಶ್​ ಬ್ಯಾರಿಯರ್​ ಅಳವಡಿಸಲಾಗುತ್ತಿದೆ. ಅದರಂತೆ ಪ್ರಾಯೋಗಿಕವಾಗಿ ಅಗರ ಕೆರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ದೊಮ್ಮಲೂರು ಬಳಿ ವೈಜ್ಞಾನಿಕವಾಗಿ ಅಲ್ಯುಮಿನಿಯಂ ಬಲೆ ಅಳವಡಿಸಲಾಗಿದೆ. ವಾರ್ಷಿಕ ನೀರುಗಾಲುವೆ ನಿರ್ವಹಣೆಗೆ ಗುತ್ತಿಗೆ ಕರೆದಿದ್ದು, 36 ಕೋಟಿ ರೂ.ಗೆ ವಾರ್ಷಿಕ ಗುತ್ತಿಗೆ ನೀಡಿದೆ.

ಸಂಗ್ರಹವಾಗುವ ಕಸವನ್ನು ಎರಡು ದಿನಕ್ಕೊಮ್ಮೆ ತೆರವು ಮಾಡಲಾಗುತ್ತದೆ. ಈ ಸಂಬಂಧ ಗುತ್ತಿಗೆದಾರರು ಅಗರ ಕೆರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ದೊಮ್ಮಲೂರು ಬಳಿ ಕಸ ತೆರವು ಮಾಡಲು ಸಿಬ್ಬಂದಿ ಹಾಗೂ ವಾಹನವನ್ನು ನಿಯೋಜನೆ ಮಾಡಲಾಗಿದೆ. ಆ ಮೂರು ಸ್ಥಳಗಳಲ್ಲಿ ಸಿಬ್ಬಂದಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಎರಡು ದಿನಕ್ಕೊಮ್ಮೆ ತೆರವು ಮಾಡುತ್ತಿದ್ದಾರೆ.

ABOUT THE AUTHOR

...view details