ಕರ್ನಾಟಕ

karnataka

ETV Bharat / state

ಆರೋಗ್ಯ ಸೇತು ಆ್ಯಪ್ ಬಳಕೆ ವಿಚಾರದಲ್ಲಿ ಎನ್.ಇ.ಸಿ ತೀರ್ಮಾನವೇ ಅಂತಿಮ: ಹೈಕೋರ್ಟ್​ಗೆ ಸ್ಪಷ್ಟಪಡಿಸಿದ ಕೇಂದ್ರ...

ಸರ್ಕಾರಿ ಸಂಸ್ಥೆಗಳು ಆ್ಯಪ್​ ಬಳಕೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಆ್ಯಪ್ ಇಲ್ಲವೆಂಬ ಕಾರಣಕ್ಕೆ ಸರ್ಕಾರದ ಸೇವೆ ಅಥವಾ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದೆ.

highcourt
ಹೈಕೋರ್ಟ್​

By

Published : Oct 19, 2020, 5:36 PM IST

ಬೆಂಗಳೂರು: ಆರೋಗ್ಯ ಸೇತು ಆ್ಯಪ್ ಬಳಕೆ ವಿಚಾರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (ಎನ್.ಇ.ಸಿ)ಯ ತೀರ್ಮಾನವೇ ಅಂತಿಮ. ಆ್ಯಪ್ ಬಳಕೆ ಕಡ್ಡಾಯವಲ್ಲ ಎಂದು ಎನ್.ಇ.ಸಿ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಪ್ರಶ್ನಿಸಿ ನಗರದ ಅನಿವರ್ ಅರವಿಂದ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಕೇಂದ್ರ ಈ ಸ್ಪಷ್ಟನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಕೇಂದ್ರ ಸರ್ಕಾರ ಈವರೆಗೂ ಆ್ಯಪ್ ಕಡ್ಡಾಯ ಬಳಕೆ ಕುರಿತಂತೆ ಆಕ್ಷೇಪಣೆ ಸಲ್ಲಿಸಿಲ್ಲ ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಕೇಂದ್ರದ ಪರ ವಕೀಲರು, ಈ ವಿಚಾರದಲ್ಲಿ ಎನ್ಇಸಿ ತೀರ್ಮಾನವೇ ಅಂತಿಮ. ಹೀಗಾಗಿ ಆ್ಯಪ್​​ ಕಡ್ಡಾಯವಲ್ಲ. ಆ್ಯಪ್ ಇಲ್ಲದ ಕಾರಣಕ್ಕೆ ಸೇವೆಗಳನ್ನು ನಿರಾಕರಿಸುವುದಾಗಿ ಕೇಂದ್ರದ ಯಾವುದೇ ಇಲಾಖೆಯೂ ಹೇಳಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೆಲವೊಮ್ಮೆ ಸ್ಥಿತಿವಂತರೂ ಮೊಬೈಲ್ ಬಳಕೆ ಮಾಡುವುದಿಲ್ಲ. ಅಂತವರಿಗೆ ಆ್ಯಪ್ ಕಡ್ಡಾಯಗೊಳಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿತು. ಅಲ್ಲದೇ, ಸರ್ಕಾರಿ ಸಂಸ್ಥೆಗಳು ಆ್ಯಪ್​ ಬಳಕೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಆ್ಯಪ್ ಇಲ್ಲವೆಂಬ ಕಾರಣಕ್ಕೆ ಸರ್ಕಾರದ ಸೇವೆ ಅಥವಾ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆ ಮುಂದೂಡಿತು.

ಏರ್ ಪೋರ್ಟ್ ಸೇರಿದಂತೆ ಕೆಲ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಪಿಐಎಲ್ ಸಲ್ಲಿಸಲಾಗಿದೆ.

ABOUT THE AUTHOR

...view details