ಬೆಂಗಳೂರು:ಆಸ್ತಿ ಅನ್ನೋದು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತೆ. ಕೆಲವೊಮ್ಮೆ ಕೊಲೆ ಮಾಡುವ ಹಂತಕ್ಕೂ ಹೋಗಿಬಿಡುತ್ತೆ. ಇಲ್ಲಾಗಿದ್ದೂ ಕೂಡ ಅದೇ. ಆಸ್ತಿ ಬೇಕೆಂದು ಪೀಡಿಸುತ್ತಿದ್ದ ಸೊಸೆ ಕೊನೆಗೆ ಅತ್ತೆಯನ್ನ ಕೊಂದೇ ಬಿಟ್ಟಿರುವ ಆರೋಪದಡಿ ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ. ಸುಗುಣ ಬಂಧಿತ ಆರೋಪಿತೆ. ರಾಣಿಯಮ್ಮ (76) ಕೊಲೆಯಾದ ವೃದ್ದೆ.
ರಾಣಿಯಮ್ಮ ಶ್ರೀರಾಂಪುರ 7ನೇ ಮುಖ್ಯರಸ್ತೆಯಲ್ಲಿ ವಾಸ ಮಾಡುತ್ತಿದ್ದರು. ಗಂಡ ಕೂಡ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ತನ್ನ ಮೂರು ಜನ ಗಂಡುಮಕ್ಕಳಿಗೆ ಸಮಾನವಾಗಿ ಒಂದೊಂದು ಮನೆ ನೀಡಿದ್ದರು. ನಂತರ ಯಾರ ಸಹವಾಸವೂ ಬೇಡ ಅಂತಾ ತಾನೇ ಒಂದು ಮನೆಯಲ್ಲಿ ವಾಸವಿದ್ದರು. ಸ್ವತಃ ಊಟ ಬಟ್ಟೆ ಎಲ್ಲವನ್ನೂ ನೋಡಿಕೊಂಡು ಯಾರ ಸಹವಾಸಕ್ಕೂ ಹೋಗದೇ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಕಷ್ಟದ ಬದುಕು ಕಟ್ಟಿಕೊಂಡಿದ್ದರು.
ಆದರೆ, ಅವಳು ರಾಣಿಯಮ್ಮ ಇದ್ದ ಸಣ್ಣದೊಂದು ಕೋಣೆಯ ಮೇಲೂ ಎರಡನೇ ಸೊಸೆ ಸುಗುಣ ಕಣ್ಣುಬಿದ್ದಿತ್ತು. ಅಷ್ಟಕ್ಕೂ ಈ ಸುಗುಣ ದೂರದವಳಲ್ಲ. ಸ್ವತಃ ರಾಣಿಯಮ್ಮ ತಮ್ಮನ ಮಗಳೇ. ನಮ್ಮವಳೇ ಅಂತಾ ತನ್ನ ಎರಡನೇ ಮಗನಿಗೆ ಮದುವೆ ಮಾಡಿಸಿಕೊಂಡಿದ್ದರು. ಆದರೆ ಆಕೆಯೇ ಸದ್ಯ ಜೀವ ತೆಗೆದಿದ್ದಾಳೆ.