ಬೆಂಗಳೂರು ಉತ್ತರ ಕ್ಷೇತ್ರದಿಂದ ಸತತ ಎರಡನೇ ಬಾರಿ ಗೆಲುವು ಸಾಧಿಸಿರುವ ಸದಾನಂದಗೌಡರು ಕಳೆದ ಬಾರಿಯೂ ಮೋದಿ ಸಂಪುಟ ಸೇರಿದ್ದರು. ರೈಲ್ವೆ ಮಂತ್ರಿ, ಕಾನೂನು ಮತ್ತು ನ್ಯಾಯ ಹಾಗೂ ಅಂಕಿ -ಅಂಶ ಮತ್ತು ಯೋಜನಾ ಅನುಷ್ಠಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಬಿಜೆಪಿಯ ಹೊಸ ಸರ್ಕಾರ ಭಾಗವಾಗಿದ್ದಾರೆ.
ಸದಾನಂದ ಗೌಡ ಅವರು ಅಂದಿನ ಜನ ಸಂಘದ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದವರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷಾಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ, ರಾಜ್ಯ ಬಿಜೆಪಿ ಪಕ್ಷದ ಕಾರ್ಯದರ್ಶಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.
1994 ಮತ್ತು 1999 ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ಪ್ರತಿಪಕ್ಷದ ಉಪನಾಯಕರಾದರು. 2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೊಯ್ಲಿ ಅವರನ್ನು ಸೋಲಿಸಿ 14ನೇ ಲೋಕಸಭೆಗೆ ಆಯ್ಕೆಯಾದರು. 2008 ರಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರಕ್ಕೆ ಲೋಕಸಭೆಗೆ ಆಯ್ಕೆಯಾದರು.
ಪ್ರಮಾಣ ಸ್ವೀಕರಿಸಿದ ಸದಾನಂದಗೌಡ 2011 ರಲ್ಲಿ ಬಿ.ಎಸ್. ಯಡಿಯೂರಪ್ಪ ಬಳಿಕ ಕರ್ನಾಟಕದ 20 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2012 ರಲ್ಲಿ ರಾಜೀನಾಮೆ ನೀಡಿ, ಮುಖ್ಯಮಂತ್ರಿಗೆ ಸೀಟ್ನ್ನು ಜಗದೀಶ್ ಶೆಟ್ಟರ್ ಅವರಿಗೆ ಬಿಟ್ಟು ಕೊಡುತ್ತಾರೆ. ನಂತರ 2014 ರಲ್ಲಿ ಬೆಂಗಳೂರಿನ ಉತ್ತರ ಕ್ಷೇತ್ರದಿಂದ ಗೆಲುವು ಪಡೆದು, ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಇದೀಗ ಮತ್ತೊಂದು ಸಾರಿ ಮೋದಿ ಕ್ಯಾಬಿನೆಟ್ ಸೇರಿದ್ದಾರೆ.