ಬೆಂಗಳೂರು/ಶಿವಮೊಗ್ಗ :ಕೋವಿಡ್ ಹೊಡೆತದಿಂದ ನಲುಗಿದ ಅದೆಷ್ಟೋ ಪೋಷಕರು ತಮ್ಮ ಮಕ್ಕಳ ಶುಲ್ಕ ಕಟ್ಟಲಾಗ್ತಿಲ್ಲ. ಹಾಗಾಗಿ, ಖಾಸಗಿ ಶಾಲೆಯಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿರುವ ವಿಚಾರ ಅಧ್ಯಯನದಿಂದ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಅಬ್ಬರ ಶುರುವಾಗಿದೆ. 9ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲಾಗಿದೆ. ಇದಕ್ಕೂ ಮೊದಲು ಶೇ.50ರಷ್ಟು ಖಾಸಗಿ ಶಾಲೆಗಳು ತೆರೆದಿರಲೇ ಇಲ್ಲ. ರೂಪ್ಸಾ ಸಂಘದಿಂದ ಸರ್ವೇ ನಡೆಸಿದ ಸಂದರ್ಭದಲ್ಲಿ 1500ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಮುಂದಿನ ದಿನಗಳಲ್ಲಿ ತೆರೆಯೋದಿಲ್ಲ ಎಂದು ತಿಳಿಸಿವೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಶುಲ್ಕ ಭರಿಸದ ಕಾರಣ ಶಾಲೆಯ ಮೂಲಸೌಕರ್ಯಕ್ಕೂ ಹಣವಿಲ್ಲದ ಸ್ಥಿತಿ ಇದೆ.
ಸರ್ಕಾರಿ ಶಾಲೆಗಳತ್ತ ಮುಖಮಾಡಿದ ವಿದ್ಯಾರ್ಥಿಗಳು - ಖಾಸಗಿ ಶಾಲೆಗಳ ಪಾಡೇನು? ಸ್ಯಾಟ್ಸ್ ಸಮೀಕ್ಷೆ ಪ್ರಕಾರ 1-10ನೇ ತರಗತಿಯೊಳಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. 10 ಮತ್ತು 12ನೇ ತರಗತಿಗೆ ಸುಮಾರು ಒಂದು ಲಕ್ಷದ ಎರಡು ಸಾವಿರ ಮಕ್ಕಳು ದಾಖಲಾತಿಯೇ ಆಗಿಲ್ಲ.
ಇನ್ನು, ಶಿವಮೊಗ್ಗದ ಕಥೆಯೂ ಇದ್ರಿಂದ ಹೊರತಲ್ಲ. ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಮಕ್ಕಳು ಸೇರಿರುವ ಪ್ರಮಾಣ ಶೇ.20ರಷ್ಟು ಹೆಚ್ಚಿದೆ. ಹಾಗಾಗಿ, ಖಾಸಗಿ ಶಾಲೆಗಳೀಗ ಶುಲ್ಕದೆಡೆಗೆ ಗಮನ ಹರಿಸದೆ ಮಕ್ಕಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಹರಸಾಹಸ ನಡೆಸಿವೆ. ಕೋವಿಡ್ನಿಂದ ಶ್ರೀಸಾಮಾನ್ಯನ ಜೀವನ ತತ್ತರಿಸಿದೆ. ಅದರಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಇದರ ಪ್ರತಿಕೂಲ ಪರಿಣಾಮ ಬೀರುತ್ತಿದೆ.