ಆನೇಕಲ್:ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಆನೇಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೃಹತ್ ರೋಡ್ ಶೋ ಮುಗಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಸ್ವತಂತ್ರ ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಮಾಡಿಲ್ಲ. ಬಹುತೇಕ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿ ಆ ರಾಜ್ಯಗಳಿಂದ ಲೂಟಿ ಮಾಡಿರುವುದೇ ಅವರ ಸಾಧನೆ ಎಂದು ಕಿಡಿಕಾರಿದರು.
400 ರೂಪಾಯಿಗಳು ಇದ್ದಂತಹ ಗ್ಯಾಸ್ ಸಿಲಿಂಡರ್ ಮೇಲೆ ಮೋದಿ ಅಧಿಕಾರಕ್ಕೆ ಬಂದ ಮೇಲೆ 1,200 ರೂಪಾಯಿಗಳಿಗೆ ಏರಿಕೆ ಕಂಡಿದೆ. ನಿರುದ್ಯೋಗ ತಾಂಡವ ಆಡುತ್ತಿದ್ದು, ಇವೆಲ್ಲವನ್ನು ಸರಿದೂಗಿಸುವಲ್ಲಿ ಬಿಜೆಪಿ ವಿಫಲವಾಗಿದೆ. ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಕಾರಣ ನನ್ನನ್ನು ಸಂಸತ್ತಿನಿಂದ ಹೊರ ಹಾಕಿದ್ದಾರೆ. ಇದಕ್ಕೆ ತಕ್ಕ ಬೆಲೆಯನ್ನು ಬಿಜೆಪಿಯವರು ತೆರುತ್ತಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮೋದಿಯವರಿಗೆ ಬಡಜನರ ಕಷ್ಟ ಅರ್ಥವಾಗುವುದಿಲ್ಲ, ಚುನಾವಣೆ ಬಂದಾಗ ಮಾತ್ರ ಬಡವರು ನೆನಪಾಗುತ್ತಾರೆ. ಉಳಿದ ಸಮಯದಲ್ಲಿ ಶ್ರೀಮಂತರ ಅಭಿವೃದ್ಧಿಯನ್ನು ಮಾಡಿಕೊಂಡು ಕಾಲಹರಣ ಮಾಡುತ್ತಾರೆ ಎಂದು ಆರೋಪಿಸಿದರು. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ಮೋದಿಯವರು ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಮಾತನಾಡದೆ, ತಾವು ಏನು ಅಭಿವೃದ್ಧಿಯನ್ನು ಮಾಡಿದ್ದೇವೆ ಎಂದು ಎಲ್ಲಿಯೂ ತಿಳಿಸದೆ ಕೇವಲ ಮತಯಾಚನೆಗೆ ಬಂದು ಹೋಗಿದ್ದಾರೆ. ಕರ್ನಾಟಕದ ಚುನಾವಣೆ ಮೋದಿಯವರ ಚುನಾವಣೆ ಅಲ್ಲ, ಇದು ಕರ್ನಾಟಕದ ಜನತೆಯ ಚುನಾವಣೆ ಎಂದು ಹೇಳಿದರು.