ಬೆಂಗಳೂರು :ಹತ್ಯೆಗೆ ಸಂಚು ರೂಪಿಸಿರುವ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ.
ದೂರಿನ ಸಾರಾಂಶ :ಮತ್ತಗದಹಳ್ಳಿ ಗೋಪಾಲಕೃಷ್ಣ ಮತ್ತು ಇತರರು ನನ್ನ ವಿರುದ್ಧ ಕೊಲೆ ಸಂಚು, ಮಾನಹಾನಿ, ಅನವಶ್ಯಕ ವಿಷಯಗಳಲ್ಲಿ, ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ಜೀವ ಭಯ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾನು ಸಿಂಗನಾಯಕನಹಳ್ಳಿಯಲ್ಲಿ ವಾಸವಿದ್ದು, ಸತತವಾಗಿ ಯಲಹಂಕ ಕ್ಷೇತ್ರದಲ್ಲಿ ಶಾಸಕನಾಗಿ ಜನಸೇವೆ ಮಾಡುತ್ತಿದ್ದೇನೆ. ಇದನ್ನು ಸಹಿಸದೆ ದ್ವೇಷ, ಅಸೂಯೆಗಳಿಂದ ಮುತ್ತಗದಹಳ್ಳಿ ಗೋಪಾಲಕೃಷ್ಣ ಮತ್ತು ಇತರರು ಸೇರಿಕೊಂಡು ಕುಳ್ಳ ದೇವರಾಜ್ ಎಂಬಾತನ ಕಡೆಯಿಂದ ಮತ್ತು ಆಂಧ್ರದ ತಂಡದಿಂದ ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಯಲಹಂಕದಲ್ಲಿ ಕಡಬಗೆರೆ ಸೀನಾ ಆಲಿಯಾಸ್ ಶ್ರೀನಿವಾಸ್ ಕೊಲೆ ಸಂಚು ಪ್ರಕರಣದಲ್ಲಿ ನಾನು ಮತ್ತು ತನ್ನ ಸ್ನೇಹಿತರು ಇಲ್ಲದಿದ್ದರೂ ಆತನ ಕಡೆಯಿಂದ ಹೇಳಿಕೆ ನೀಡುವ ಪ್ರಯತ್ನ ಮಾಡಿಸಿ ಅನವಶ್ಯಕವಾಗಿ ಅಪರಾಧ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದರು.
ಶಾಸಕನಾದ ನನ್ನ ಮಾನಹಾನಿ ಮಾಡಿರುತ್ತಾರೆ. ಈ ಹಿಂದೆ ನನ್ನ ಮೇಲೆ ವಿಚಾರಣೆಯಾದ ಕೆಲವು ಪ್ರಕರಣಗಳಲ್ಲಿಯೂ ಈತನ ಕೈವಾಡ ಇರುವ ಬಗ್ಗೆ ಅನುಮಾನ ಇದೆ. ವಿಶೇಷವಾಗಿ ನಾನು ತೋಟಕ್ಕೆ ಒಂಟಿಯಾಗಿ ಬರುವ ವೇಳೆ, ವಾಕಿಂಗ್ ಮಾಡುವ ವೇಳೆ, ಕಾರ್ಯಕ್ರಮಗಳಿಗೆ ಹೋಗಿ ಬರುವ ವೇಳೆ ನನ್ನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಬೇಕು ಎಂಬ ಆತನ ದ್ವೇಷ ಮನೋಭಾವ ಮತ್ತು ಸಂಚಿಗೆ ಪೂರಕವಾಗಿ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನವೂ ಸಾರ್ವಜನಿಕರ ಗಮನಕ್ಕೆ ಬಂದಿದೆ.