ಬೆಂಗಳೂರು: ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸಭಾಧ್ಯಕ್ಷ ಯು ಟಿ ಖಾದರ್ ವಿಧಾನಸಭೆಯಲ್ಲಿ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು, ಸಚಿವರ ಹಾಜರಾತಿ ಇಲ್ಲ ಎಂದು ಆಕ್ಷೇಪಿಸಿದ ವೇಳೆ ಮಾತನಾಡಿದ ಸ್ಪೀಕರ್, ಪ್ರತಿ ದಿನವೂ ತಡ ಮಾಡುವುದು ಸರಿಯಲ್ಲ ಎಂದು ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ಖಡಕ್ ಸೂಚನೆ ನೀಡಿದರು.
ನೂತನ ಶಾಸಕರು 11 ಗಂಟೆಗೆ ಬಂದಿದ್ದರು. ಅದಕ್ಕೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಸಕಾಲಕ್ಕೆ ಸಚಿವರು ಬಾರದ ಹಿನ್ನೆಲೆಯಲ್ಲಿ ಸದನ ಆರಂಭ ವಿಳಂಬವಾಯಿತು. ಮಂತ್ರಿಗಳು ಸಮಯ ಪಾಲನೆ ಮಾಡಬೇಕು. ಸಮಯ ಸದ್ಬಳಕೆ ಆಗಬೇಕು. ಸಚಿವರಿಲ್ಲ ಎಂದು ಎದ್ದು ಹೋಗುವುದು ಪರಿಹಾರವಲ್ಲ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಹಿರಿಯ ಶಾಸಕ ಆರ್ ಅಶೋಕ್ ಅವರು, ಇಂಧನ ಸಚಿವ ಕೆ ಜೆ ಜಾರ್ಜ್ ಅವರನ್ನು ಹೊರತುಪಡಿಸಿದರೆ, ಬೇರೆ ಯಾವ ಸಚಿವರು ಇಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವರು ಇಲ್ಲದಿದ್ದರೆ ಕಲಾಪ ನಡೆಯುವುದಾದರೂ ಹೇಗೆ? ಸರ್ಕಾರಕ್ಕೆ ಸಡಿಲ ಕೊಡಬೇಡಿ. ಸರ್ಕಾರ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ವಿಧಾನಸಭೆಯ ಘನತೆಗೆ ತಕ್ಕದ್ದಲ್ಲ. ಈ ರೀತಿಯಾದರೆ ಸದನ ಘನತೆ, ಗೌರವ ಏನಾಗುತ್ತದೆ? ಸರ್ಕಾರದ ಕಿವಿ ಹಿಂಡಿ, ಸಚಿವರು ಬರುವವರೆಗೆ ಕಲಾಪ ಮುಂದೂಡಿ ಎಂದು ಹೇಳಿದರು.
ಮಾತು ಮುಂದುವರೆಸಿದ ಅಶೋಕ್ ಅವರು, ಕಲಾಪಕ್ಕೆ ಸರಿಯಾದ ಸಮಯಕ್ಕೆ ಬಾರದ ಸಚಿವರ ಚಳಿ ಬಿಡಿಸಿ. ನೀವು ಹೇಗೆ ಚಳಿ ಬಿಡಿಸಬೇಕೆಂದರೆ, ಇವರು ಮನೆಗೆ ಹೋದ ಮೇಲೆ ನಿಜವಾಗಿ ಜ್ವರ ಬಂದು ಮಾತ್ರೆ ತೆಗೆದುಕೊಳ್ಳವಂತಾಗಬೇಕು. ರಮೇಶ ಕುಮಾರ್ ಸಭಾಧ್ಯಕ್ಷರಾಗಿದ್ದಾಗ ಸರ್ಕಾರದ ಇಂತಹ ಅಸಡ್ಡೆಗೆ ಶಾಸ್ತಿ ಮಾಡುತ್ತಿದ್ದರು. ಒಂದು ದಿನ ಸಭಾಧ್ಯಕ್ಷರು ಹೊರ ನಡೆದರು. ಅವರ ಮನವೊಲಿಸಲು ಆಗ ಎರಡು ಗಂಟೆ ಬೇಕಾಯಿತು ಎಂದು ನೆನಪು ಮಾಡಿಕೊಂಡರು.
ಅಷ್ಟರಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಕೆಲವು ಸಚಿವರು ಸದನಕ್ಕೆ ಆಗಮಿಸಿದರು. ಆಗ ಸಭಾಧ್ಯಕ್ಷರು ಸದನದಲ್ಲಿ ಆರು ಜನ ಸಚಿವರು ಇದ್ದಾರೆ. ಎಷ್ಟು ಸಚಿವರು ಬಂದಿದ್ದಾರೆ ಎಂಬುದು ಮುಖ್ಯವಲ್ಲ. ತಡವಾಗಿ ಬರಬಾರದು ಎಂದು ಹೇಳಿ ಶುಕ್ರವಾರ ಸಕಾಲಕ್ಕೆ ಸದನಕ್ಕೆ ಆಗಮಿಸಿದ ಶಾಸಕರ ಹೆಸರನ್ನು ಸದನದ ಮುಂದಿಟ್ಟರು.
ಮಧ್ಯೆ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯ ಲಕ್ಷ್ಮಣ ಸವದಿ ಅವರು, ಸದನಕ್ಕೆ ಸಕಾಲಕ್ಕೆ ಬಂದವರಿಗೆ ಬಹುಮಾನ ಕೊಡುತ್ತೀರಾ? ರೋಲೆಕ್ಸ್ ವಾಚ್ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕ ಷಡಕ್ಷರಿ ಅವರು ಮೊದಲ ಬಹುಮಾನ ಚಿನ್ನದ ನಾಣ್ಯ, ಎರಡನೇ ಬಹುಮಾನ ಬೆಳ್ಳಿ ಹಾಗೂ ಮೂರನೇ ಬಹುಮಾನ ಕಬ್ಬಿಣ ಎಂದರು. ಆಗ ಸಭಾದ್ಯಕ್ಷರು ಇದನ್ನು ನಾವು ಕೊಡುವುದಿಲ್ಲ. ಷಡಕ್ಷರಿ ಕೊಡುತ್ತಾರೆ ಎಂದು ಹೇಳಿ ಮುಂದಿನ ಕಲಾಪಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ :ವಿಪಕ್ಷಗಳ ಸಭೆ ಬರೇ ಫೋಟೋ ಶೋ ಅಷ್ಟೇ, ಎಲ್ಲರೂ ಕೈ ಎತ್ತಿ ಹೋಗ್ತಾರೆ: ಆರ್ ಅಶೋಕ್