ಕರ್ನಾಟಕ

karnataka

ETV Bharat / state

ಸಹಕಾರ ಇಲಾಖೆಯ ಅಭಿವೃದ್ಧಿಗೆ ಶೀಘ್ರ ಕೇಂದ್ರ ಸಹಕಾರ ಸಚಿವರ ಭೇಟಿ: ಎಸ್.ಟಿ.ಸೋಮಶೇಖರ್ - ಜಿಲ್ಲಾ ಸಹಕಾರ ಯೂನಿಯನ್‌

ಸಹಕಾರ ಇಲಾಖೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಸಲುವಾಗಿ ಶೀಘ್ರದಲ್ಲೇ ಕೇಂದ್ರ ಸಹಕಾರ ಸಚಿವರನ್ನು ಭೇಟಿ ಮಾಡುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

somshekhar
ರಾಜ್ಯ ಮಟ್ಟದ ಕಾರ್ಯಗಾರ ಸಮಾರೋಪ ಕಾರ್ಯಕ್ರಮ

By

Published : Jul 8, 2021, 6:33 PM IST

ಬೆಂಗಳೂರು:ಸಹಕಾರ ಇಲಾಖೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳು ಹಾಗೂ ಇಲಾಖೆಯ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸಹಕಾರ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಕಾರ್ಯಗಾರ ಸಮಾರೋಪ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ವತಿಯಿಂದ ಎಲ್ಲಾ ಜಿಲ್ಲಾ ಸಹಕಾರ ಯೂನಿಯನ್‌ಗಳ ಸಿಬ್ಬಂದಿ ವರ್ಗದವರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಗಾರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ರು. ಸಹಕಾರ ಇಲಾಖೆ ಪ್ರತ್ಯೇಕವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಹಕಾರ ಸಚಿವರನ್ನು ಭೇಟಿ ಮಾಡಿ ನಮ್ಮ ಸಹಕಾರ ಇಲಾಖೆಯ ಸಮಸ್ಯೆಗಳನ್ನು ಅವರ ಜೊತೆ ಚರ್ಚೆ ಮಾಡಿ ಬಗೆಹರಿಸಲು ಮನವಿ ಮಾಡಲಾಗುವುದು ಎಂದರು.

ನಿರಂತರ ಪ್ರಯತ್ನದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಸಂಪುಟ ದರ್ಜೆ ಸಚಿವರನ್ನು ನೀಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇದುವರೆಗೂ ಕೃಷಿ ಇಲಾಖೆಯಲ್ಲಿ ಸಹಕಾರ ಸಚಿವಾಲಯ ಇತ್ತು. ಆದರೂ ವಿಶೇಷ ಆದ್ಯತೆ ಸಿಗುತ್ತಿರಲಿಲ್ಲ. ಹಾಗಾಗಿ, ಕೃಷಿ ಇಲಾಖೆಯಿಂದ ಪ್ರತ್ಯೇಕಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಲಾಗುತಿತ್ತು. ಈಗ ಅದು ಚಾಲನೆಗೆ ಬಂದಿದೆ ಎಂದು ಹೇಳಿದರು.

ಸಹಕಾರ ಇಲಾಖೆಯಲ್ಲಿ ಅಸಹಕಾರವಿದ್ದರೆ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಎಲ್ಲರೂ ಸಹಕಾರ ಮನೋಭಾವದಿಂದ ಕೆಲಸ ಮಾಡಿದಾಗ ಶೇ.100ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದ್ರು. ರಾಜ್ಯ ಸಹಕಾರ ಮಹಾಮಂಡಲವು ಮಾತೃ ಸಂಸ್ಥೆಯಾಗಿದ್ದು, ಜಿಲ್ಲಾ ಯೂನಿಯನ್‌ಗಳು ನೋಂದಣಿಯಾಗಿ ಶಿಕ್ಷಣ ನಿಧಿಯನ್ನು ಸಂಗ್ರಹ ಮಾಡಬೇಕು. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೂನಿಯನ್ ಗಳು ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಸಚಿವರು ಪರಿಶೀಲನಾ ಸಭೆಯನ್ನು ನಡೆಸುವಾಗ ಯೂನಿಯನ್‌ಗಳ ಸಿಇಓ ಮತ್ತು ಪ್ರಾಂಶುಪಾಲರು ತಪ್ಪದೇ ಸಭೆಯಲ್ಲಿ ಭಾಗವಹಿಸಬೇಕು. ಶಿಷ್ಟಾಚಾರವನ್ನು ಪಾಲನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ರಿಜಿಸ್ಟ್ರಾರ್​ ಎಸ್.ಜಿಯಾವುಲ್ಲಾ, ರಾಜ್ಯ ಸಹಕಾರ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್‌, ಕಾರ್ಯದರ್ಶಿ ಲಕ್ಷ್ಮೀಪತಯ್ಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details