ಬೆಂಗಳೂರು: ಕೃಷಿ ಸಾಲ ವಿತರಣೆ ಕುರಿತಂತೆ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು ಮತ್ತು ಅಪೆಕ್ಸ್ ಬ್ಯಾಂಕ್ನ ನಿರ್ದೇಶಕರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಸಚಿವ ಸೋಮಶೇಖರ್, ಬಹುತೇಕ ಡಿಸಿಸಿ ಬ್ಯಾಂಕುಗಳು ಶೇ.80 ರಿಂದ 100ರಷ್ಟು ಸಾಧನೆ ಮಾಡಿವೆ. ಉಳಿದ ಡಿಸಿಸಿ ಬ್ಯಾಂಕುಗಳು ನಿಗದಿತ ಅವಧಿಯೊಳಗೆ ಸರ್ಕಾರ ನಿಗದಿಪಡಿಸಿರುವ ಗುರಿ ಮುಟ್ಟಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನವೆಂಬರ್ ತಿಂಗಳವರೆಗೆ 17.16 ಲಕ್ಷ ರೈತರಿಗೆ 12,518.92 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗಿದೆ. ಇದರಲ್ಲಿ 1 ಲಕ್ಷ ಹೊಸ ರೈತರಿಗೆ 792.61 ಕೋಟಿ ರೂ. ಸಾಲ ವಿತರಿಸಲಾಗಿದೆ. ಪರಿಶಿಷ್ಟ ಪಂಗಡದ 2.33 ಲಕ್ಷ ರೈತರಿಗೆ 1428.64 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆಯಲ್ಲಿನ ಪ್ರಗತಿ ಕುರಿತು ಸಚಿವರು ಮಾಹಿತಿ ಕೇಳಿದರು. 22,590 ರೈತರಿಗೆ 711 ಕೋಟಿ ರೂ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 1635 ರೈತರಿಗೆ 45.36 ಕೋಟಿ ರೂ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಸಭೆಯಲ್ಲಿ ಸಚಿವರುಗಳಾದ ಶಿವರಾಮ್ ಹೆಬ್ಬಾರ್, ಹಾಲಪ್ಪ ಆಚಾರ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಪಿ ಕಳಸದ್, ಮಾಜಿ ಸಚಿವರಾದ ಲಕ್ಷ್ಮಣ್ ಸವದಿ, ಶಾಸಕರುಗಳಾದ ರಾಜಕುಮಾರ್ ಪಾಟೀಲ ತೇಲ್ಕೂರ್, ರಾಜಣ್ಣ ಸೇರಿದಂತೆ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡಮಾನ ಇಟ್ಟು ವಂಚನೆ: ಮೂವರ ಗ್ಯಾಂಗ್ ವಶಕ್ಕೆ