ಬೆಂಗಳೂರು : ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬಸ್ ಪಾಸ್‍ಗಳ ದರವನ್ನು ಹೆಚ್ಚಿಸುವುದಿಲ್ಲ ಮತ್ತು ಈ ಹಿಂದೆ ಇದ್ದ ಮಾನದಂಡಗಳನ್ನು ಬದಲಿಸುವ ಯಾವುದೇ ಉದ್ದೇಶವಿಲ್ಲ. ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನಗತ್ಯ ಆತಂಕ ಬೇಡ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾರ್ಥಿಗಳ ಬಸ್ ಪಾಸ್ ದರ ಹೆಚ್ಚಿಸಲಾಗುತ್ತದೆ ಎಂಬುದು ಕೇವಲ ವದಂತಿಯಷ್ಟೇ.. ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಬಸ್ ಪಾಸ್‍ಗಳನ್ನು ಯಾವ ಪ್ರಮಾಣದಲ್ಲಿ ವಿತರಿಸಲಾಗಿತ್ತೋ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಸಹ ಅದೇ ರೀತಿ ಅಳವಡಿಸಿಕೊಳ್ಳಲಾಗುವುದು. ಅಷ್ಟೇ ಅಲ್ಲ, ಹಿಂದಿನ ಮಾನದಂಡಗಳನ್ನೇ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಬಸ್ ಖರೀದಿ ಪ್ರಕ್ರಿಯೆ ಇಲ್ಲ :ಸಾರಿಗೆ ನಿಗಮಗಳ ವೇತನ ಬಿಡುಗಡೆ ಸಂಬಂಧ ಕೆಲ ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಹೊಸ ಬಸ್ ಖರೀದಿ ಪ್ರತಿಕ್ರಿಯೆ ಸಹ ಮಾಡದಿರಲು ಸೂಚನೆ ನೀಡಲಾಗಿದೆ. ತೀರಾ ಅವಶ್ಯಕತೆ ಇದ್ದಲ್ಲಿ ವಾಹನಗಳ ನಿರ್ವಹಣೆಗೋಸ್ಕರ ಬಿಡಿ ಭಾಗಗಳ ಖರೀದಿಗೆ ಮಾತ್ರ ವೆಚ್ಚ ಮಾಡಬೇಕೆಂದು ಸರ್ಕಾರ ಆದೇಶಿಸಿದೆ.
ಸಂಸ್ಥೆಗೆ ಸ್ವೀಕೃತವಾಗಬೇಕಿರುವ ಬಾಡಿಗೆ ಹಣವನ್ನು ಕಡ್ಡಾಯವಾಗಿ ವಸೂಲಾತಿ ಮಾಡಬೇಕು. ಸಾರಿಗೆ ಸಂಸ್ಥೆಗಳ ನೌಕರರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನಕ್ಕಾಗಿ ರಾಜ್ಯ ಸರ್ಕಾರ,4 ನಿಗಮಗಳಿಗೆ 423 ಕೋಟಿ ಹಣ ರಿಲೀಸ್ ಮಾಡಿದೆ ಎಂದರು.