ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯಶಸ್ವಿನಿ ಯೋಜನೆ ಮರು ಜಾರಿಯಿಂದ ಜನವರಿ ಒಂದೇ ತಿಂಗಳಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ಗುಣಮಟ್ಟದ ಆರೋಗ್ಯ ಸೇವೆ ಪಡೆದುಕೊಂಡಿದ್ದು, ಈ ಯೋಜನೆಯಡಿ 33.10 ಲಕ್ಷ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಯೋಜನೆಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಯಶಸ್ವಿನಿ ಯೋಜನೆ ಕುರಿತು ಇಂದು ನಗರದಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಸಚಿವರು, ಜನವರಿ ಅಂತ್ಯದವರೆಗೆ ಈ ಯೋಜನೆಯಡಿ 30 ಲಕ್ಷ ಸದಸ್ಯರ ಗುರಿಗೆ ಬದಲಾಗಿ 33.10 ಲಕ್ಷ ಸದಸ್ಯರನ್ನು ನೋಂದಾಯಿಸಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಸದಸ್ಯರ ನೋಂದಣಿ ಕಾರ್ಯ ಮುಂದುವರೆಯುವ ಜೊತೆಗೆ 27 ಜಿಲ್ಲೆಗಳಲ್ಲಿನ 127 ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಜನವರಿ ಒಂದೇ ತಿಂಗಳಲ್ಲಿ 1000 ಕ್ಕೂ ಹೆಚ್ಚು ಫಲಾನುಭವಿಗಳು ಯೊಜನೆಯಡಿ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಯಶಸ್ವಿನಿ ಯೋಜನೆಯಡಿ ಇದುವರೆಗೂ ರಾಜ್ಯಾದ್ಯಂತ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ 474 ನೆಟ್‌ವರ್ಕ್ ಆಸ್ಪತ್ರೆಗಳು ಟ್ರಸ್ಟ್ ನಲ್ಲಿ ನೋಂದಾಯಿಸಿಕೊಂಡಿವೆ. ಜನವರಿ 1ರಿಂದಲೇ ಫಲಾನುಭವಿಗಳಿಗೆ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.