ಬೆಂಗಳೂರು: ಮಾನವ ಕಾಡಿಗೆ ನುಗ್ಗುತ್ತಿರುವುದರ ಪರಿಣಾಮವಾಗಿ ನಾಡಿಗೆ ಕಾಡುಪ್ರಾಣಿಗಳು ಬರುತ್ತಿದ್ದು, ನಾಡಿಗೆ ಕಾಡುಪ್ರಾಣಿಗಳ ದಾಳಿಯನ್ನು ತಡೆಯಲು ಕಾಡನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಬಸವರಾಜ ಪಾಟೀಲ ಇಟಗಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ದಟ್ಟ ಅರಣ್ಯ ಬೆಳೆಸುವ ದೃಷ್ಟಿಯಿಂದ ಯೋಜನೆ ಸಿದ್ದಪಡಿಸುತ್ತಿದ್ದೇವೆ ಎಂದರು.
ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟುತ್ತಿದ್ದೇವೆ, ಹೋಂ ಸ್ಟೇ ಕಟ್ಟುತ್ತಿದ್ದೇವೆ. ಇದರಿಂದ ಪ್ರಾಣಿಗಳ ನೀರು, ಆಹಾರ ನಾವು ಬಳಸಿಕೊಳ್ಳುತ್ತಿದ್ದೇವೆ. ಮಾನವ ಕಾಡಿಗೆ ನುಗ್ಗುತ್ತಿದ್ದಾನೆ, ಇದಕ್ಕೆ ಕಡಿವಾಣ ಹಾಕಬೇಕಿದೆ. ಅರಣ್ಯ ಬೆಳೆಸುವ ಬಗ್ಗೆ ಚಿಂತನೆ ನಡೆಸಬೇಕು, ಕಾಡು ಪ್ರಾಣಿಗಳಿಗೆ ಆಹಾರ, ನೀರು ಸಿಗುವಂತೆ ಮಾಡಿದರೆ ಅವು ನಾಡಿಗೆ ನುಗ್ಗಲ್ಲ, ಇದಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಬೇಸಿಗೆ ಆರಂಭಗೊಂಡಿದ್ದು, ಅರಣ್ಯದಲ್ಲಿ ಕಾಣಿಸಿಕೊಳ್ಳುವ ಬೆಂಕಿ ನಂದಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಸನ್ನದ್ಧವಾಗಿರಲಿದೆ. ಇದಕ್ಕಾಗಿ ಬೇಕಾಗುವ ಆಧುನಿಕ ಉಪಕರಣಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಹಸಿರೀಕರಣದ ಪ್ರಮಾಣ ಹೆಚ್ಚುತ್ತಿದೆ. ಶೇ 18.3 ರಿಂದ ಶೇ 22.81 ಕ್ಕೆ ತಲುಪಿದೆ. ಶೇ 30ರ ಹಸಿರೀಕರಣದ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ ಎಂದರು.
ಆದಷ್ಟು ಬೇಗ ನರಭಕ್ಷಕ ಹುಲಿ ಸೆರೆ: ಬೆಂಗಳೂರು, ಕೊಡಗಿನಲ್ಲಿ ಭೀತಿ ಸೃಷ್ಟಿಸಿರುವ ನರಭಕ್ಷಕ ಹುಲಿಯನ್ನು ಆದಷ್ಟು ಬೇಗ ಹಿಡಿಯಲಾಗುತ್ತದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.