ಕರ್ನಾಟಕ

karnataka

ETV Bharat / state

ಸರ್ಕಾರದಿಂದ ವಿವಾದಾತ್ಮಕ ನಡೆ : ಅನಗತ್ಯ ಹಾಕಲಾದ ರೌಡಿಶೀಟ್ ಕೈಬಿಡಲು ಪೊಲೀಸರಿಗೆ ಸೂಚನೆ

ರಾಜ್ಯದಲ್ಲಿ ಹಲವರು ವಿದೇಶಿಗರು ಅನಧಿಕೃತವಾಗಿ ನೆಲೆಸಿದ್ದಾರೆ. ಅಂಥವರ ವಿರುದ್ಧ ಕ್ರಮ‌ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಕ್ರಮವಾಗಿ ನೆಲೆಸಿರುವವರು ಡ್ರಗ್ಸ್ ಹಾಗೂ ಇತರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ವೀಸಾ ಅವಧಿ, ಎಲ್ಲಿಯವರು, ಏನು ಕೆಲಸ ಮಾಡ್ತಾರೆ ಎಲ್ಲವನ್ನು ಸರ್ವೇ ಮಾಡಲು ತೀರ್ಮಾನ ಮಾಡಿದ್ದೇವೆ..

minister-araga-jnanedra-instruct-to-police-to-drop-rowdy-list
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Sep 6, 2021, 10:00 PM IST

ಬೆಂಗಳೂರು :ಅನಗತ್ಯವಾಗಿ ಹಾಕಲಾದ ರೌಡಿಶೀಟರ್ ಪಟ್ಟಿಯನ್ನು ಕೈ ಬಿಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ‌ ಮಾತನಾಡಿದ ಅವರು, ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಲಾಗಿದೆ.‌ ಕಾನೂನು ಉಲ್ಲಂಘನೆ ಮಾಡುವ ಹಾಗೂ ಅಪರಾಧ ಪ್ರಕರಣಗಳಲ್ಲಿ ಪದೇಪದೆ ಭಾಗಿಯಾಗುವವರ ಮೇಲೆ ರೌಡಿ ಪಟ್ಟಿ ತೆರೆಯಲಾಗುತ್ತದೆ.

ಆದರೆ, ಸಣ್ಣಪುಟ್ಟ ಪ್ರಕರಣಗಳಿಗೆ ಸಂಬಂಧಿಸಿ ರೌಡಿ ಪಟ್ಟಿ ತೆರೆಯಲಾಗಿದೆ. ಸದ್ಯ ಇಂತಹ ಪ್ರಕರಣಗಳನ್ನ ಪರಿಶೀಲಿಸಿ, ಅನಗತ್ಯವಾಗಿ ಹಾಕಲಾದ ರೌಡಿಶೀಟರ್ ಪಟ್ಟಿಯನ್ನು ಕೈ ಬಿಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಅನುಮಾನಗಳಿಗೆ ಕಾರಣವಾಯ್ತು ಸರ್ಕಾರದ ನಡೆ : ಗೃಹ ಸಚಿವರ ಈ‌ ನಿರ್ಧಾರ ರಾಜಕೀಯವಾಗಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಳ್ಳಲಾಗಿದೆಯಾ ಎಂಬ ಸಂದೇಹ ಮೂಡಿದೆ.

ಗೃಹ ಸಚಿವರ ಸ್ಪಷ್ಟನೆ : ಈ ನಿಟ್ಟಿನಲ್ಲಿ ಸ್ಪಷ್ಟೀಕರಣ ನೀಡಿದ ಸಚಿವರು, ಅನೇಕ ಮಾನದಂಡ ಇಟ್ಟು ರೌಡಿಶೀಟರ್ ಪಟ್ಟಿ ಪರಾಮರ್ಶೆ ಮಾಡ್ತೇವೆ. ಆ ಮಾನದಂಡದ ಆಧಾರದಲ್ಲಿ ಮಾತ್ರ ಅದನ್ನು ತೆಗಿತೇವೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳವಳಿಗಾರರು, ರೈತ ಹೋರಾಟಗಾರರ ಮೇಲೆ ರೌಡಿಶೀಟ್ ಹಣೆ ಪಟ್ಟಿ ಕಟ್ಟಿದ್ದಾರೆ.

ಇದರಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲ. ಜೊತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡ್ತಿಲ್ಲ. ಎಸ್​ಪಿಗಳ ಸುಪರ್ದಿಯಲ್ಲಿ ರಿವ್ಯೂ ಮಾಡಲಾಗುತ್ತದೆ‌. ಹೀಗಾಗಿ, ರೌಡಿಶೀಟರ್ ಪಟ್ಟಿಯನ್ನು ಪರಾಮರ್ಶೆ ಮಾಡುವುದಕ್ಕೆ ನಿಯಮಾವಳಿ ಅಡಿಯಲ್ಲಿ ಅವಕಾಶವಿದೆ.‌ ಇದರ ದುರುಪಯೋಗ ಆಗುವುದಿಲ್ಲ ಎಂದು ಸ್ಪಷ್ಟ‌ಪಡಿಸಿದರು.

ವೀಸಾ ಅವಧಿ ಮೀರಿದ ವಿದೇಶಿಗರ ವಿರುದ್ಧ ಕ್ರಮ : ರಾಜ್ಯದಲ್ಲಿ ಹಲವರು ವಿದೇಶಿಗರು ಅನಧಿಕೃತವಾಗಿ ನೆಲೆಸಿದ್ದಾರೆ. ಅಂಥವರ ವಿರುದ್ಧ ಕ್ರಮ‌ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಕ್ರಮವಾಗಿ ನೆಲೆಸಿರುವವರು ಡ್ರಗ್ಸ್ ಹಾಗೂ ಇತರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ವೀಸಾ ಅವಧಿ, ಎಲ್ಲಿಯವರು, ಏನು ಕೆಲಸ ಮಾಡ್ತಾರೆ ಎಲ್ಲವನ್ನು ಸರ್ವೇ ಮಾಡಲು ತೀರ್ಮಾನ ಮಾಡಿದ್ದೇವೆ.

ಅವಧಿಬದ್ಧವಾಗಿ ಸರ್ವೇ ಮಾಡಲು ಸೂಚಿಸಿದ್ದೇವೆ. ಅಫ್ಘಾನ್​​ ರಾಜಕೀಯ ವ್ಯತ್ಯಾಸದ ಬಳಿಕ ಅಕ್ರಮ ವಿದೇಶಿಗರ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳಿದ್ದೇವೆ ಎಂದರು. ಎನ್​ಐಎ ಘಟಕ ಬೆಂಗಳೂರು ಅಥವಾ ಮಂಗಳೂರಿನಲ್ಲಿ ತೆರೆಯಲು ಕೇಂದ್ರಕ್ಕೆ ಶಿಫಾರಸು ಮಾಡ್ತೇವೆ. ಮಾಂಸಕ್ಕಾಗಿ ಜಾನುವಾರು ಸಾಗಾಣಿಕೆ ತಡೆಯಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮಾದಕ ವಸ್ತು ಸಾಗಟ ಹತ್ತಿಕ್ಕಿ :ಮಾದಕ ವಸ್ತುವಿನ ಸಾಗಾಣಿಕೆ ಮಾರಾಟ ಬಹಳ ದೊಡ್ಡ ದಂಧೆ. ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ರಾಜ್ಯದ ಎಲ್ಲ ಭಾಗಗಳಲ್ಲಿ ಹತ್ತಿಕ್ಕುವ ಕೆಲಸ ಅವ್ಯಾಹತವಾಗಿ ಮಾಡ್ತಿದ್ದಾರೆ. ಆದರೂ ಪೂರ್ಣ ತಹಬಂದಿಗೆ ಬಂದಿಲ್ಲ. ವಿದ್ಯಾರ್ಥಿಗಳನ್ನು ಜೀವಂತ ಶವ ಮಾಡ್ತಿದೆ. ಹೀಗಾಗಿ, ಡ್ರಗ್ಸ್ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.

ಚಾರ್ಜ್‌ಶೀಟ್​ ಸಲ್ಲಿಕೆ : ಯಾವುದೇ ಪ್ರಕರಣಗಳು ನಡೆದಾಗ ಎಫ್​ಐಆರ್​ಗೂ ಚಾರ್ಜ್‌ಶೀಟ್​ಗೂ ಬಹಳ ದಿನಗಳ ಅಂತರ ಆಗ್ತಿದೆ. ಇದನ್ನು ನಿಗದಿತ ದಿನಾಂಕದೊಳಗೆ ಚಾರ್ಜ್‌ಶೀಟ್ ಸಲ್ಲಿಕೆಗೆ ಮುಂದಾಗಬೇಕು. ಚಾರ್ಜ್‌ಶೀಟ್ ಆದ ಮೇಲೆ ಕನ್ವಿಕ್ಷನ್ ಪರ್ಸೆಂಟೇಜ್ ಕಡಿಮೆ‌ ಇದೆ. ಬಹಳ ಲಘುವಾದ ಭಾವನೆ ಬರಬಾರದು ಅಪರಾಧಿಗಳಿಗೆ.‌ ಈ ನಿಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಹಾಕಲು ಸೂಚಿಸಲಾಗಿದೆ ಎಂದು ತಿಳಿಸಿದರು.

ದೇಶ ವಿರೋಧಿ ಕೃತ್ಯಕ್ಕೆ ಕಡಿವಾಣ: ದುಷ್ಕರ್ಮಿಗಳು ಗೋವಾ ಹಾಗೂ ಕೇರಳ ಕರಾವಳಿ ತೀರದಿಂದ ಒಳನುಸುಳಿ ರಾಜ್ಯದಲ್ಲಿ ಕುಕೃತ್ಯ ನಡೆಸುವ ಸಾಧ್ಯತೆ ಹೆಚ್ಚಿದೆ. ಮೀನುಗಾರರ ವೇಷದಲ್ಲಿ ಬಂದು ಬಾಂಬೆಯಲ್ಲಿ ಆದ ಕೃತ್ಯ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಕರಾವಳಿ ಕಾವಲು ಪಡೆ ಇನ್ನಷ್ಡು ಬಲಗೊಳ್ಳಬೇಕು ಎಂದು ಸೂಚನೆ ನೀಡಿದ್ದೇವೆ.

ಕರಾವಳಿ ಕಾವಲು ಪಡೆಗೆ ಸ್ಪೀಡ್ ಬೋಟ್​ಗಳನ್ನು ಇನ್ನಷ್ಟು ಒದಗಿಸಲು ಸಿದ್ಧರಾಗಿದ್ದೇವೆ. ದೇಶ ವಿರೋಧಿ ಕೃತ್ಯ, ದಂಧೆ ನಡೆಸುವವರ ಮೇಲೆ ಕಣ್ಗಾವಲು ಇಡಲು ಹೇಳಿದ್ದೇವೆ. ಪಟ್ಟಣ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಭಂಗ ಮಾಡುವ ರೌಡಿ ಪಡೆಗಳನ್ನು ಮೆಟ್ಟಿನಿಲ್ಲಬೇಕು ಅಂತಾ ಹೇಳಿದ್ದೇವೆ. ಜನರ ನೆಮ್ಮದಿಯ ಬದುಕಿಗೆ ತೊಂದರೆ ಉಂಟು ಮಾಡುವ ದುಷ್ಕರ್ಮಿಗಳನ್ನು ಮಟ್ಡ ಹಾಕಲು ಸೂಚಿಸಿದ್ದೇವೆ ಎಂದರು.

ಜಿಲೆಟಿನ್​ ಕಡ್ಡಿ ಕುರಿತು ತನಿಖೆ : ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ವಸ್ತುಗಳ ಸಾಗಾಣಿಕೆ ಮೇಲೆ ಗಮನ ಹರಿಸಬೇಕು. ಗಣಿಗಾರಿಕೆ ಹೆಸರಲ್ಲಿ ಜಿಲೆಟಿನ್ ಕಡ್ಡಿ ಎಲ್ಲಿಂದ ಬರ್ತಿದೆ, ಎಲ್ಲಿಗೆ ಸಾಗಾಣಿಕೆ ಆಗ್ತಿದೆ‌ ಎಂಬುದನ್ನು ಗಮನಿಸಬೇಕಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ‌ ಸೂಚಿಸಲಾಗಿದೆ‌ ಎಂದರು.

ಬೀಟ್​ ಸಿಸ್ಟಮ್​ ಬಲಪಡಿಸಲು ಕ್ರಮ : ಬ್ರಿಟಿಷ್ ಕಾಲದಿಂದಲೂ ಬೀಟ್ ಸಿಸ್ಟಮ್ ನಡೆದುಕೊಂಡು ಬಂದಿದೆ. ಇದನ್ನು ಇನ್ನಷ್ಟು ಬಲ ಪಡಿಸಲು ಮತ್ತಷ್ಟು ಕ್ರಮಕೈಗೊಳ್ತೇವೆ. ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಗರ ಗ್ರಾಮೀಣ ಎರಡು ಭಾಗದಲ್ಲಿ ಬೀಟ್ ಸಿಸ್ಟಮ್ ಹೆಚ್ಚಿಸಬೇಕು ಅಂತಾ ಸೂಚಿಸಿದ್ದೇವೆ. ಪೊಲೀಸ್ ಇಲಾಖೆ ಬಲಪಡಿಸಲು ಇನ್ನಷ್ಟು ಕಾಳಜಿ ವಹಿಸುತ್ತಿದ್ದೇವೆ ಎಂದರು.

ABOUT THE AUTHOR

...view details