ಕರ್ನಾಟಕ

karnataka

ETV Bharat / state

ಹಾಲು, ತರಕಾರಿ ಬೆಲೆ ಏರಿಕೆ; ಇನ್ನಷ್ಟು ಬಿಸಿಯಾಗಲಿದೆ ಟಿ-ಕಾಫಿ; ಹೊಟ್ಟೆ ಉರಿಸಲಿವೆ ಬೇಕರಿ ತಿಂಡಿ - ಸಾಮಾನ್ಯ ದರ್ಶಿನಿ ಹೋಟೆಲ್‌

ರಾಜ್ಯದಲ್ಲಿ ನಾಳೆ ಬೆಳಿಗ್ಗೆಯಿಂದಲೇ ಹಾಲಿನ ದರ ಹೆಚ್ಚಳವಾಗಲಿದ್ದು, ಜನ ಹೊಸದಾಗಿ ಇನ್ನಷ್ಟು ಆರ್ಥಿಕ ಹೊರೆ ಹೊರಲು ಸಿದ್ಧವಾಗಬೇಕಿದೆ.

Hotel breakfast rate
Hotel breakfast rate

By

Published : Jul 31, 2023, 11:00 PM IST

Updated : Aug 1, 2023, 1:27 PM IST

ಬೆಂಗಳೂರು : ಬೆಲೆ ಏರಿಕೆಯ ಭಾರಕ್ಕೆ ಬೆಂಡಾಗಿರುವ ರಾಜ್ಯದ ನಾಗರಿಕರಿಗೆ ಆ. 1 ರಿಂದ ಹಾಲಿನ ಬೆಲೆ ಏರಿಕೆ ಹೊಸದಾಗಿ ಬಿಸಿ ಮುಟ್ಟಿಸಲಿದೆ. ಈಗಾಗಲೇ ಟೊಮೆಟೊ ಜತೆಯಲ್ಲೇ ಹಲವು ತರಕಾರಿ ಬೆಲೆ ಗಗನಕ್ಕೇರಿದೆ. ಇವುಗಳ ಜತೆ ಬಹುತೇಕ ಎಲ್ಲಾ ಅಗತ್ಯ ವಸ್ತುಗಳು ತುಟ್ಟಿಯಾಗಿವೆ. ಈ ಮಧ್ಯೆ ಮಂಗಳವಾರ ಬೆಳಗ್ಗೆಯಿಂದ ಹಾಲಿನ ದರ ಹೆಚ್ಚಳವಾಗಲಿದ್ದು, ಜನ ಹೊಸದಾಗಿ ಇನ್ನಷ್ಟು ಆರ್ಥಿಕ ಹೊರೆ ಹೊರಲು ಸಿದ್ಧವಾಗಬೇಕಿದೆ. ಏಕೆಂದರೆ ಈ ಏರಿಕೆಯ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಚಹಾ-ಕಾಫಿ ದರ ಶೇ.10ರಷ್ಟು ಹೆಚ್ಚಾಗಲಿದೆ.

ಸಿಹಿ ತಿಂಡಿ ಮಳಿಗೆ ಹಾಗೂ ಬೇಕರಿಗಳಲ್ಲಿ ಹಾಲಿನ ಉತ್ಪನ್ನದ ಬೆಲೆ ಸಹಜವಾಗಿ ಶೇ.15ರಷ್ಟು ಏರಿಕೆಯಾಗಲಿವೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಿಂದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದ ನಾಗರಿಕರಿಗೆ ನಿರಾಸೆಯಾಗಿದೆ. ಹೋಟೆಲ್‌ ಹಾಗೂ ಸಿಹಿ ತಿಂಡಿಗಳ ಬೆಲೆ ಏರಿಕೆ ಆಗಲಿದೆ ಎನ್ನುವುದನ್ನು ನೆನಪಿಸಿಕೊಂಡು ಹೌಹಾರುವ ಸ್ಥಿತಿ ನಿರ್ಮಾಣವಾಗಿದೆ.

ದರ ಏರಿಕೆ ಬಳಿಕ ಹಾಲಿನ ದರದ ಪಟ್ಟಿ ಈ ರೀತಿ ಇದ್ದು, ಟೋನ್ಡ್ ಹಾಲು - 42 ರೂ. ಹೋಮೋಜಿನೈಸ್ಡ್‌ ಹಾಲು - 43 ರೂ. ಹೋಮೋಜಿನೈಸ್ಡ್‌ ಹಸುವಿನ ಹಾಲು - 47 ರೂ. ಸ್ಪೆಷಲ್‌ ಹಾಲು- 48 ರೂ. ಶುಭಂ ಹಾಲು- 48 ರೂ. ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಾಲು- 49 ರೂ. ಸಮೃದ್ಧಿ ಹಾಲು- 53 ರೂ. ಸಂತೃಪ್ತಿ ಹಾಲು- 55 ರೂ. ಡಬಲ್ಡ್‌ ಟೋನ್ಡ್‌ ಹಾಲು- 41 ರೂ. ಹಾಗೂ ಮೊಸರು ಪ್ರತಿ ಲೀಟರ್‌ಗೆ - 50 ರೂ ಆಗಲಿದೆ. ಟಿ-ಕಾಫಿ ಜತೆ ಹೋಟೆಲ್‌ ತಿಂಡಿ, ಊಟದ ದರವೂ ಪರಿಷ್ಕರಣೆ ಆಗಲಿದೆ. ಕಾರಣ ಹಾಲಿನ ಉತ್ಪನ್ನಗಳ ಬಳಕೆ ಆಗುವ ಎಲ್ಲಾ ಆಹಾರದ ಮೇಲೆ ಬೆಲೆ ಏರಿಕೆ ಅನ್ವಯವಾಗಲಿದೆ.

ಹೀಗಾಗಿ, ಊಟ – 90 ರೂ. ‌100 ರಿಂದ 105 ಅಥವಾ 110, ಪೂರಿ (3)- 50 ರೂ. 60 ರಿಂದ 65ರೂ. ರೈಸ್ ಬಾತ್- 35 – 45 ರೂ. 50 ರಿಂದ 55 ರೂ. ಚೌಚೌಬಾತ್ – 40ರೂ. 45 ರಿಂದ 55 ರೂ‌. ಇಡ್ಲಿ ವಡಾ – 50 ರೂ‌. 60 ರಿಂದ 65ರೂ. ಕಾಫಿ/ಟೀ – 10 – 15 ರೂ. 18 ರಿಂದ 20 ರೂ.ಗೆ ಏರಿಕೆ ಆಗಲಿದೆ. ಇದು ಕೆಲ ದರ್ಶಿನಿ ಹೋಟೆಲ್‌ಗಳ ಬೆಲೆಯಾಗಿದ್ದು, ಇದು ಪ್ರದೇಶವಾರು, ಹೋಟೆಲ್‌ ಜನಪ್ರಿಯತೆವಾರು ಬದಲಾಗಿದೆ.

ಹೆಚ್ಚಳಕ್ಕೆ ತೀರ್ಮಾನ: ಹೋಟೆಲ್ ತಿಂಡಿ ದರವನ್ನು ಶೇ.10ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಜನಪ್ರಿಯ ಹೋಟೆಲ್‌ಗಳು ಆಗಾಗ ತಮ್ಮ ಬೆಲೆ ಏರಿಕೆ ಮಾಡುತ್ತವೆ. ಆದರೆ ಸಾಮಾನ್ಯ ದರ್ಶಿನಿ ಹೋಟೆಲ್‌ಗಳಲ್ಲಿ ಬೆಲೆ ಏರಿಕೆ ವರ್ಷಕ್ಕೆ ಒಮ್ಮೆ ಮಾತ್ರ ಆಗುತ್ತದೆ. ನಾವು ಹೋಟೆಲ್‌ ಸಂಘದಿಂದ ಶೇ.10ರಷ್ಟು ಬೆಲೆ ಏರಿಕೆಗೆ ಸೂಚಿಸಿದ್ದೇವೆ. ಪ್ರತಿವರ್ಷ ಏರಿಕೆಯಾಗುವ ದುಪ್ಪಟ್ಟು ಪ್ರಮಾಣ ಇದಾಗಿದೆ.

ನಗರದ ಕೆಲವೆಡೆ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಾರೆ. ಅಲ್ಲಿ ಹೋಟೆಲ್‌ ಮಾಲೀಕರು ಹೆಚ್ಚಳ ಮಾಡುವ ಇಲ್ಲವೇ ಬಿಡುವ ನಿರ್ಧಾರವನ್ನು ಅವರೇ ಕೈಗೊಳ್ಳಬಹುದು. ಹೋಟೆಲ್ ಮಾಲೀಕರ ಸಂಘದ ಅಸೋಸಿಯೇಷನ್ ಸಭೆಯಲ್ಲಿ ದರ ಹೆಚ್ಚಳದ ನಿರ್ಧಾರ ಕೈಗೊಂಡಿದ್ದು, ನಾಳೆಯಿಂದ ಬೆಲೆ ಏರಿಕೆ ಆಗಲಿದೆ. ನಮ್ಮ ಅಸ್ಥಿತ್ವದ ದೃಷ್ಟಿಯಿಂದ ಇದು ಅನಿವಾರ್ಯ ಸಹ ಎನ್ನುತ್ತಾರೆ ಹೋಟೆಲ್​ ಉದ್ಯಮಿ ಪಿ. ಸಿ ರಾವ್.

ಊಟದ ದರ 10 ರೂಪಾಯಿ ಏರಿಸಲು ಚಿಂತನೆ: ಹಾಲಿನ ದರ ಆ. 1ರಿಂದ ಲೀಟರ್​ಗೆ 3 ರೂಪಾಯಿ ಹೆಚ್ಚಳವಾಗಿದೆ. ತರಕಾರಿ ದರ ದಿನದಿಂದ ದಿನಕ್ಕೆ ಏರುತ್ತಿದೆ. ಹಾಗಾಗಿ ಹೋಟೆಲ್ ಆಹಾರಗಳ ದರ ಏರಿಸುವುದು ಅನಿವಾರ್ಯ. ಕಾಫಿ-ಟೀ 3 ರೂಪಾಯಿ ಹಾಗೂ ತಿಂಡಿ-ತಿನಿಸುಗಳ ದರ 5 ರೂಪಾಯಿ ಏರಿಸಲಾಗುತ್ತಿದೆ. ಊಟದ ದರ 10ರೂಪಾಯಿ ಏರಿಸಲು ಚಿಂತನೆ ನಡೆದಿದ್ದು, ಇದರಿಂದ ಗ್ರಾಹಕರ ಪ್ರತಿಕ್ರಿಯೆ ಹೇಗಿರಬಹುದು ಎಂದು ಊಹಿಸಿ ತೀರ್ಮಾನ ಕೈಗೊಳ್ಳಲು ಸಹ ಯೋಚನೆ ಮಾಡಲಾಗಿದೆ. ಒಮ್ಮೆ ಬೆಲೆ ಏರಿಕೆ ಮಾಡಿ ಗ್ರಾಹಕರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ, ಆಗ ಬೆಲೆ ಇಳಿಸುವ ಚಿಂತನೆ ಮಾಡಲು ಯೋಚಿಸಲಾಗಿದೆ. ಅಲ್ಲದೇ ಸರ್ಕಾರದ ಸಹಕಾರ ಕೋರಲು ಸಹ ಕೆಲವರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿಯೂ ಚಿಂತನೆ ನಡೆದಿದೆ.

ಹೊಸಕೆರೆಹಳ್ಳಿಯ ಅಯ್ಯಂಗಾರ್ ಬೇಕರಿ ಮತ್ತು ಸ್ವೀಟ್ಸ್ ಮಳಿಗೆ ಮಾಲೀಕ ಶ್ರೀನಿವಾಸ್‌ ಪ್ರಕಾರ, ಆಗಸ್ಟ್ 1ರಿಂದ ನಂದಿನಿ ಹಾಲು 39 ರೂ. ಗಳ ಬೆಲೆಯ ಹಾಲು (ಟೋನ್ಡ್) ಲೀಟರ್‌ಗೆ 42 ರೂ.ಗೆ ಮಾರಾಟವಾಗಲಿದೆ. ಇನ್ನುಳಿದಂತೆ ಹಾಲಿನ ಮಾದರಿಗೆ ಅನುಗುಣವಾಗಿ ಎಲ್ಲಾ ರೀತಿಯ ಹಾಲಿನ ದರದಲ್ಲಿ ಲೀಟರ್‌ಗೆ 3 ರೂ. ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ:ತರಕಾರಿ ಬಲು ದುಬಾರಿ : ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶ ಕೊರತೆ ಆತಂಕ

Last Updated : Aug 1, 2023, 1:27 PM IST

ABOUT THE AUTHOR

...view details