ಬೆಂಗಳೂರು: ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡಿ ಕೆಎಂಎಫ್ ಅಧ್ಯಕ್ಷಗಾದಿ ಹಿಡಿಯಲು ಹೊರಟಿದ್ದ ರೇವಣ್ಣ ಪ್ಲಾನ್ಗೆ ಚುನಾವಣೆ ಮಂದೂಡುವ ಕೌಂಟರ್ ಪ್ಲಾನ್ ಮಾಡಿದ್ದು ನಾನೇ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.
ರೇವಣ್ಣ ಪ್ಲಾನ್ಗೆ ಕೌಂಟರ್ ಪ್ಲಾನ್ ನಂದೇ: ಎ.ಮಂಜು ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕೆಎಂಎಫ್ಗೆ ರೈತರ ಪರವಾದ ಅಧಿಕಾರ ಬರುವ ಅವಕಾಶ ಸಿಕ್ಕಿದೆ. ಇದಕ್ಕೆ ಮೊದಲ ರೂವಾರಿ ನಾನು. ನಾನೇ ಯೋಜನೆ ರೂಪಿಸಿದ್ದು, 26ರಂದು ಮುಖ್ಯಮಂತ್ರಿಗಳು ಚುನಾವಣೆ ಮುಂದೂಡಲು ಪೀಠಿಕೆ ಹಾಕಿದ್ದೆ. ವೈಯಕ್ತಿಕವಾಗಿ ನನ್ನ ಲಾಭಕ್ಕಲ್ಲ. ಈ ಸಂಸ್ಥೆ ಉಳಿಯಬೇಕು. ಕೆಎಂಎಫ್ ಸಂಸ್ಥೆ ಒಬ್ಬರ ಪಾಲಾಗದೆ ರಾಜ್ಯದ ಆಸ್ತಿಯಾಗಬೇಕು. ಅದರ ಲಾಭ ರೈತರಿಗೆ ತಲುಪಬೇಕು ಎನ್ನುವ ಉದ್ದೇಶ ಅಷ್ಟೇ ಎಂದರು.
ಕಾಂಗ್ರೆಸ್ ಮತದಾರರನ್ನು ಹೈದರಾಬಾದ್ಗೆ ಕರೆದೊಯ್ದು ಅಧ್ಯಕ್ಷರಾಗಲು ರೇವಣ್ಣ ಸಿದ್ಧತೆ ನಡೆಸಿದ್ದರು. ಅದಕ್ಕೆ ಯಡಿಯೂರಪ್ಪ ಸಿಎಂ ಆದ ನಂತರ ಚುನಾವಣೆ ಮುಂದೂಡುವ ಮೂಲಕ ಹಿನ್ನಡೆಯಾಗುವಂತೆ ಮಾಡಲಾಯಿತು. ಇವರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ ಅದು ಯಾವುದು ಅವರಿಗೆ ಪ್ಲಸ್ ಆಗಲಿಲ್ಲ. ಇಂದು ಅವಿರೋಧವಾಗಿ ಆಯ್ಕೆಯಾಗುವ ಸನ್ನಿವೇಶ ಎದುರಾಗಿದೆ. ನಿಜವಾಗಿ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಿದೆ ಎಂದರು.
ಹಾಸನ ಒಕ್ಕೂಟದಿಂದ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತ್ಯೇಕ ಮಾಡುವುದರಲ್ಲಿ ತಪ್ಪೇನಿಲ್ಲ. ಚಿಕ್ಕಮಗಳೂರಿನಿಂದ ಹಾಸನಕ್ಕೆ ಹಾಲು ಸರಬರಾಜು ಮಾಡಲು ದೂರವಾಗುತ್ತಿತ್ತು. ಈಗ ಅಲ್ಲಿಯೇ ಒಕ್ಕೂಟ ಮಾಡಿ ಆ ಭಾಗದ ಜನರಿಗೆ ಅನುಕೂಲ ಮಾಡುವುದರಲ್ಲಿ ತಪ್ಪೇನಿಲ್ಲ. ಕಲಬುರಗಿಯಲ್ಲಿ 50 ಸಾವಿರ ಲೀಟರ್ ಹಾಲಿನ ಉತ್ಪಾದನೆ ಇದ್ದರೂ ಒಕ್ಕೂಟ ಮಾಡಿರುವುದು ಕಣ್ಣ ಮುಂದಿದೆ ಎಂದು ಹಾಸನ ಹಾಲು ಒಕ್ಕೂಟವನ್ನು ವಿಭಜನೆ ಮಾಡುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ನಾನು ಸಚಿವನಾಗಿದ್ದಾಗಲೂ ಇದನ್ನು ಮಾಡಲು ಹೊರಟಿದ್ದೆ. ಆದರೆ ಹಾಸನ ಅಧ್ಯಕ್ಷರಾಗಿದ್ದ ರೇವಣ್ಣ ಇದಕ್ಕೆ ಅವಕಾಶ ನೀಡಲಿಲ್ಲ. ಈಗ ಸರ್ಕಾರದ ನಿರ್ಧಾರದಿಂದ ಚಿಕ್ಕಮಗಳೂರು ಭಾಗದ ರೈತರಿಗೆ ಸಂತೋಷ ತಂದಿದೆ ಎಂದರು.