ಕರ್ನಾಟಕ

karnataka

ETV Bharat / state

ಪ್ರಧಾನಿ ನರೇಂದ್ರ ಮೋದಿ ಭಾಷಣ ನಿತ್ಯದ "ಪ್ರವಚನ" ದಂತಿದೆ: ಮಲ್ಲಿಕಾರ್ಜುನ್ ಖರ್ಗೆ ಟೀಕಾಪ್ರಹಾರ - ಪ್ರಧಾನಿ ನರೇಂದ್ರ ಮೋದಿ ಭಾಷಣ

ದೇಶದಲ್ಲಿ ಡೆಡ್ಲಿ ವೈರಸ್ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡಬೇಡಿ ಎಂದು ಮನವಿ ಮಾಡಿರುವ ನಮೋ ಅದು ಕೊನೆಯ ಅಸ್ತ್ರವಾಗಲಿ ಎಂದು ಮನವಿ ಮಾಡಿಕೊಂಡರು. ಇವರ ಭಾಷಣದ ಬಗ್ಗೆ ಕಾಂಗ್ರೆಸ್​ ಮುಖಂಡರು ವ್ಯಂಗ್ಯವಾಡಿದ್ದಾರೆ.

Mallikarjun Kharge spark on modi nation address
Mallikarjun Kharge spark on modi nation address

By

Published : Apr 20, 2021, 10:57 PM IST

ಬೆಂಗಳೂರು:ರಾಷ್ಟ್ರವನ್ನುದ್ದೇಶಿಸಿ ಇಂದು ಪ್ರಧಾನಿ ಮಾಡಿದ ಭಾಷಣವನ್ನು ರಾಜ್ಯ ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ್​ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪ್ರಧಾನಿ ಭಾಷಣದ ವಿಮರ್ಶೆ ಮಾಡಿದ್ದು, ಕೊರೊನಾ ಎರಡನೇ ಅಲೆ ಆತಂಕ ಸೃಷ್ಟಿಸಿರುವ ಸಂದರ್ಭದಲ್ಲಿ ಪ್ರಧಾನಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ಅಂತಹ ಯಾವ ವಿಷಯವೂ ಅವರ ಭಾಷಣದಲ್ಲಿ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ್​ ಖರ್ಗೆ ಟ್ವೀಟ್​​

ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ್​ ಖರ್ಗೆ ತಮ್ಮ ಟ್ವೀಟ್​ನಲ್ಲಿ, ರಾಷ್ಟ್ರವು ಎದುರಿಸುತ್ತಿರುವ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ರಾಷ್ಟ್ರಕ್ಕೆ ಭರವಸೆ ನೀಡುವ ಬದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ದಿನನಿತ್ಯದ "ಪ್ರವಚನ" ವನ್ನು ಮಾಡಿದಂತೆ ತೋರುತ್ತದೆ. ಇದು ಜನರಲ್ಲಿ ಯಾವುದೇ ವಿಶ್ವಾಸವನ್ನು ತುಂಬಿಲ್ಲ. ರಾಷ್ಟ್ರವು ಉತ್ತಮವಾಗಿ ಮಾತನಾಡುತ್ತಾರೆ, ಮಹತ್ವದ ವಿಚಾರಗಳನ್ನು ತಿಳಿಸುತ್ತಾರೆ ಎಂದು ನಿರೀಕ್ಷಿಸುತ್ತಿತ್ತು. ಆದರೆ ಪ್ರಧಾನಿ ಭಾಷಣ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಟ್ವೀಟ್​

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಟ್ವೀಟ್​ನಲ್ಲಿ, ಪ್ರಧಾನಮಂತ್ರಿಯವರ ಭಾಷಣದಲ್ಲಿ ಗಣನೀಯವಾಗಿ ಏನೂ ಇಲ್ಲ. ಆಮ್ಲಜನಕ, ಐಸಿಯು, ಹಾಸಿಗೆಗಳು ಮತ್ತು ಜೀವ ಉಳಿಸುವ ಔಷಧಿಗಳ ಕೊರತೆಗೆ ಸಂಬಂಧಿಸಿದಂತೆ ಯಾವುದೇ ಪರಿಹಾರಗಳನ್ನು ನೀಡಿಲ್ಲ. ರಾಷ್ಟ್ರವು ಎದುರಿಸುತ್ತಿರುವ ತುರ್ತು ಪರಿಸ್ಥಿತಿಯ ಅರಿವು ಪ್ರಧಾನಿ ಅವರಿಗೆ ಅರಿವಿಲ್ಲವೋ ಅಥವಾ ಅದನ್ನು ಹೇಳಲು ನಿರಾಕರಿಸಿದ್ದಾರೋ ಎನ್ನುವುದು ತಿಳಿಯುತ್ತಿಲ್ಲ. ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರವಿಲ್ಲ ಜನ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿದ್ಧರಾಮಯ್ಯ ಟ್ವೀಟ್​

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ನಲ್ಲಿ, ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ,‌ ರೆಮ್ಡೆಸಿವೆರ್‌ನಂತಹ ಪ್ರಾಣರಕ್ಷಕ ಔಷಧ ಸಿಗದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ನರೇಂದ್ರ ಮೋದಿ ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ, ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಎಂದಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಲಾಕ್​ಡೌನ್​ ಇಲ್ಲ, ಲಾಕ್​ಡೌನ್​ಗೆ ಅವಕಾಶ ನೀಡಬೇಡಿ: ದೇಶದ ಜನರಲ್ಲಿ ಮೋದಿ ಮನವಿ

ಮುಂದುವರಿದು ಮಾತನಾಡಿದ್ದು, ಕೊರೊನಾ ಉಲ್ಭಣವಾದ ಕಾರಣದಿಂದಾಗಿ ಲಾಕ್‌ಡೌನ್ ಅನಿವಾರ್ಯ ಎಂಬಂತೆ ರಾಜ್ಯ ಬಿಜೆಪಿ ಸರ್ಕಾರ ಮಾತನಾಡುತ್ತಿದೆ. ಲಾಕ್ ಡೌನ್ ಹೇರಿದರೆ ಕಷ್ಟನಷ್ಟಕ್ಕೀಡಾಗುವ ಜನತೆಗೆ ಕೇಂದ್ರ ಬಿಜೆಪಿ ಸರ್ಕಾರ ನೀಡುವ ನೆರವಿನ ಘೋಷಣೆಯನ್ನು ಜನ ನಿರೀಕ್ಷಿಸಿದ್ದರು. ಮೋದಿ ಭಾಷಣ 'ನಿಮ್ಮ ತಲೆ ಮೇಲೆ ನಿಮ್ಮ‌ ಕೈ' ಎಂಬ ಸಂದೇಶ ನೀಡಿದೆ. ಕೊರೊನಾ ಪರಿಣಾಮವನ್ನು ಸಮರ್ಥವಾಗಿ ನಿರ್ವಹಿಸಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ. ಪ್ರಧಾನಿಯವರೇ, ನೀವು ವಿಶೇಷ ಆರ್ಥಿಕ ನೆರವು ಕೊಡುವುದು ಬೇಡ , ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ತಿಳಿಸಿದ್ದಾರೆ.

ABOUT THE AUTHOR

...view details