ಕರ್ನಾಟಕ

karnataka

ETV Bharat / state

ನಿರೀಕ್ಷಣಾ ಜಾಮೀನು ಕೋರಿ ಮತ್ತು ತಮ್ಮ ವಿರುದ್ಧದ ಎಫ್​ಐಆರ್ ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಮಾಡಾಳ್ ವಿರುಪಾಕ್ಷಪ್ಪ - ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ

ಪುತ್ರನಿಂದ ಲಂಚ ಸ್ವೀಕಾರ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ನಿರೀಕ್ಷಣಾ ಜಾಮೀನು ಕೋರಿ ಮತ್ತು ತಮ್ಮ ವಿರುದ್ಧದ ಎಫ್​ಐಆರ್ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

madal-virupakshappa-moved-high-court-seeking-anticipatory-bail
ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಾಡಾಳ್ ವಿರುಪಾಕ್ಷಪ್ಪ

By

Published : Mar 6, 2023, 12:29 PM IST

Updated : Mar 6, 2023, 9:09 PM IST

ಬೆಂಗಳೂರು :ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ರಾಸಾಯನಿಕಗಳ ಪೂರೈಕೆಗೆ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡಲು ಪುತ್ರ ಪ್ರಶಾಂತ್​ ಮಾಡಾಳ್​ ಲಂಚ ಸ್ವೀಕರಿಸಿದ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ಕೆಎಸ್‌ಡಿಎಲ್‌ನ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬಂಧನ ಭೀತಿಯಲ್ಲಿರುವ ವಿರೂಪಾಕ್ಷಪ್ಪ ಸಲ್ಲಿಸಿರುವ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಪರಿಗಣಿಸಬೇಕು ಎಂದು ವಕೀಲರು ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠದ ಮುಂದೆ ಸೋಮವಾರ ಬೆಳಗ್ಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಮಂಗಳವಾರ ವಿಚಾರಣೆಗೆ ನಿಗದಿ ಮಾಡುವುದಾಗಿ ತಿಳಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?:ಕೆಎಸ್‌ಡಿಎಲ್‌ನ ಗುತ್ತಿಗೆಗೂ ಲಂಚ ಸ್ವೀಕರಿಸಿರುವವರಿಗೂ ಸಂಬಂಧ ಇಲ್ಲ. ಅಲ್ಲದೆ, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಆದರೂ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಲೊಕಾಯುಕ್ತ ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಹಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಎಫ್‌ಐಆರ್ ರದ್ದತಿಗೆ ಅರ್ಜಿ:ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಪ್ರಕರಣ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.

ಜೊತೆಗೆ, ಅರ್ಜಿ ಇತ್ಯರ್ಥವಾಗುವರೆಗೂ ಲೋಕಾಯುಕ್ತ ಪೊಲೀಸರ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕು. ಆರೋಪಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಲಂಚ ಸ್ವೀಕರಿಸಿದ ಬಗ್ಗೆ ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಪ್ರಕರಣದ ಎರಡನೇ ಆರೋಪಿ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪುತ್ರ ಪ್ರಶಾಂತ್ ಮಾಡಾಳು ಅವರಿಂದ ಲಂಚದ ಹಣ ಜಪ್ತಿ ಮಾಡಲಾಗಿದೆ ಎಂಬ ಏಕೈಕ ಕಾರಣಕ್ಕೆ ನನ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಅಲ್ಲದೆ, ಕೆಎಸ್​ಡಿಎಲ್​ ವ್ಯವಸ್ಥಾಪಕರು ಟೆಂಡರ್ ಕರೆದಿದ್ದಾರೆ. ದೂರುದಾರರಿಗೆ ಟೆಂಡರ್ ಹಂಚಿಕೆ ಹಾಗೂ ಅವರಿಂದ ಕೆಮಿಕಲ್ ಆಯಿಲ್ ಖರೀದಿಗೆ ಲಿಮಿಟೆಡ್‌ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಇಡೀ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಆದ್ದರಿಂದ ಮಾ.2ರಂದು ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ವಿರೂಪಾಕ್ಷಪ್ಪ ಅರ್ಜಿಯಲ್ಲಿ ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಚನ್ನಗಿರಿ ಕ್ಷೇತ್ರ ಶಾಸಕರೂ ಆಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ರಾಸಾಯನಿಕಗಳನ್ನು ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯದೇಶ ನೀಡಲು 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಇದರ ಮುಂದುವರಿದ ಭಾಗವಾಗಿ 40 ಲಕ್ಷ ರೂ.ಗಳನ್ನು ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ ಪ್ರಶಾಂತ್ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದ ಹಣ ವಶಕ್ಕೆ ಪಡೆದು, ಪ್ರಶಾಂತ್ ಅವರನ್ನು ಬಂಧಿಸಿದ್ದರು.

ಇದಾದ ಬಳಿಕ ವಿರೂಪಾಕ್ಷಪ್ಪ ಮತ್ತವರ ಮಗನ ಬೆಂಗಳೂರಿನ ಕಚೇರಿಗಳು ಹಾಗೂ ಮನೆ ಮತ್ತು ಚೆನ್ನಗಿರಿಯ ಮನೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಕೋಟ್ಯಂತರ ರೂ.ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಬಳಿಕ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಅಜ್ಞಾನ ಸ್ಥಳದಿಂದಲೇ ರಾಜೀನಾಮೆ ರವಾನಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಬಂದನ ಭೀತಿಯಿಂದ ತಲೆ ಮರೆಸಿಕೊಂಡಿದ್ದರು. ಇದೀಗ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ.

ನೋಟಿಸ್​ ನೀಡಲು ಲೋಕಾಯುಕ್ತ ಸಿದ್ಧತೆ:ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕಾರ ಹಾಗೂ ಬಂಧನ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ಗೆ ನೋಟಿಸ್ ನೀಡಲು ಲೋಕಾಯುಕ್ತ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮಗನ ಬಂಧನದ ಬಳಿಕ ನೈತಿಕ‌ ಹೊಣೆ ಹೊತ್ತು ಕೆಎಸ್​ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ವಿರೂಪಾಕ್ಷಪ್ಪ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರಿಂದ ವಿಚಾರಣೆಗೆ ಹಾಜರಾಗುವಂತೆ ಸಿಆರ್​ಪಿಸಿ 41(a) ಅಡಿ ನೋಟಿಸ್ ನೀಡಲು ಸಿದ್ಧರಾಗಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಈ ಬೆಳವಣಿಗೆಗಳ ನಡುವೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಶಾಸಕ ವಿರೂಪಾಕ್ಷಪ್ಪ ಮಾಡಾಳ್​ಗೆ ನೋಟಿಸ್ ಜಾರಿಗೊಳಿಸಲು ಲೋಕಾಯುಕ್ತ ಸಿದ್ಧತೆ

Last Updated : Mar 6, 2023, 9:09 PM IST

ABOUT THE AUTHOR

...view details