ನೂತನ ಬಸ್ ಸೇವೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು: ಇಷ್ಟು ದಿನ ಮಗುವಿನಂತೆ ನಿದ್ರಿಸಿ, ಕನಸುಗಳೊಂದಿಗೆ ಪ್ರಯಾಣಿಸಿ, ಅತ್ಯುನ್ನತ ಪ್ರಯಾಣದ ಅನುಭವ ಪಡೆಯಿರಿ ಎನ್ನುತ್ತಿದ್ದ ಕೆಎಸ್ಆರ್‌ಟಿಸಿ ಇದೀಗ ಸಂಭ್ರಮದ ಪ್ರಯಾಣ ಮಾಡಿ ಎಂದು ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತಿದೆ. ವಿಮಾನ ಪ್ರಯಾಣದ ಅನುಭವ ಹಾಗೂ ಉತ್ಕೃಷ್ಟ ಸೇವೆಯ ಅನುಭವ ನೀಡುವ ಐಷಾರಾಮಿ ಬಸ್‌ಗಳನ್ನು ರಸ್ತೆಗಿಳಿಸಿದೆ. ಈ ಹೊಸ ಬಸ್ಗಳ ಸಂಪೂರ್ಣ ವಿವರ ಇಲ್ಲಿದೆ.
ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ವೋಲ್ವೋ-9600s ಸರಣಿಯ ಸ್ಲೀಪರ್ ಬಸ್ ಸೇವೆ ಪ್ರಾರಂಭಿಸಿದೆ. ಅಂಬಾರಿ ಉತ್ಸವ ಹೆಸರಿನ ಬ್ರ್ಯಾಂಡ್ ಅಡಿಯಲ್ಲಿ ಸಂಭ್ರಮದ ಪ್ರಯಾಣ ಟ್ಯಾಗ್ ಲೈನ್‌ನೊಂದಿಗೆ ರಸ್ತೆಗಿಳಿಯುತ್ತಿದೆ. ದೂರ ಪ್ರಯಾಣಕ್ಕಾಗಿ ಪರಿಚಯಿಸುತ್ತಿರುವ ಈ ಐಷಾರಾಮಿ ಬಸ್‌ಗಳು ಪ್ರಾಯೋಗಿಕ ಸಂಚಾರ ಮುಗಿಸಿದ್ದು ಅಧಿಕೃತ ಸಂಚಾರ ಆರಂಭಿಸಲಿವೆ.
ರಾಜ್ಯದಲ್ಲಿ ಖಾಸಗಿ ಸೇವೆಗೆ ಸೆಡ್ಡು ಹೊಡೆಯುವಂತೆ ಐಷಾರಾಮಿ ಸಾರಿಗೆ ಸೇವೆ ಒದಗಿಸುತ್ತಿರುವ ಕೆಎಸ್ಆರ್‌ಟಿಸಿ ಇದೀಗ ವೋಲ್ವೋ ಬಿಎಸ್-VI 9600s ಮಾದರಿಯ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಗಳನ್ನು ರಸ್ತೆಗಿಳಿಸುತ್ತಿದೆ. 50 ವೋಲ್ವೋ ಸ್ಲೀಪರ್ ವಾಹನಗಳ ಪೈಕಿ ಮೊದಲ ಹಂತವಾಗಿ ಇಂದು 15 ಅಂಬಾರಿ ಉತ್ಸವ ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆಗೆ ಬಿಡುಗಡೆ ಮಾಡಿದ್ದು, ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸ್‌ಗಳನ್ನು ಖುದ್ದು ವೀಕ್ಷಿಸಿ ಚಾಲನೆ ನೀಡಿದರು. ಇನ್ನುಳಿದ 35 ಬಸ್‌ಗಳನ್ನು ಹಂತ ಹಂತವಾಗಿ ಸೇರ್ಪಡೆ ಮಾಡಲಾಗುತ್ತದೆ.
ಈ ಹೊಸ ಬಸ್ಗಳಿಗೆ ಸೂಕ್ತ ಹೆಸರು ನೀಡುವಂತೆ ಸ್ಪರ್ಧೆ ನಡೆಸಿ ಅದರಿಂದ ಆಯ್ದ ಹೆಸರಾದ ಅಂಬಾರಿ ಉತ್ಸವ ಎಂಬ ಬ್ರ್ಯಾಂಡ್ ಹೆಸರು ಮತ್ತು ಸಂಭ್ರಮದ ಪ್ರಯಾಣ ಎಂಬ ಟ್ಯಾಗ್ ಲೈನ್ ಇಡಲಾಗಿದೆ. ಈವರೆಗೂ ಕೆಎಸ್ಆರ್‌ಟಿಸಿಯಲ್ಲಿ ಅತ್ಯುನ್ನತ ಐಷಾರಾಮಿ ಬಸ್ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಆಗಿದ್ದು, ಇದೀಗ ಅದನ್ನು ಮೀರಿ ಅಂಬಾರಿ ಉತ್ಸವ ಐಷಾರಾಮಿ ಬಸ್ ಆಗಿದೆ. ಬಹುತೇಕ ದಕ್ಷಿಣ ಭಾರತದಲ್ಲಿ ಈ ಸರಣಿಯ ಬಸ್ ಅಳವಡಿಸಿಕೊಂಡ ಮೊದಲ ಸಾರಿಗೆ ನಿಗಮ ಎನ್ನುವ ಹೆಗ್ಗಳಿಕೆಗೆ ಕೆಎಸ್ಆರ್‌ಟಿಸಿ ಪಾತ್ರವಾಗಿದೆ.
ಎಲ್ಲೆಲ್ಲಿ ಸಂಚಾರ?: ನೂತನವಾಗಿ ಪರಿಚಯಿಸಿರುವ ಅಂಬಾರಿ ಉತ್ಸವ ಬಸ್‌ಗಳು ಬೆಂಗಳೂರು–ಸಿಕಂದ್ರಾಬಾದ್, ಬೆಂಗಳೂರು-ಹೈದ್ರಾಬಾದ್, ಬೆಂಗಳೂರು-ಎರ್ನಾಕುಲಂ, ಬೆಂಗಳೂರು–ತಿರುವನಂತಪುರಂ, ಬೆಂಗಳೂರು–ತ್ರಿಚೂರು, ಬೆಂಗಳೂರು–ಪಣಜಿ , ಕುಂದಾಪುರ-ಬೆಂಗಳೂರು, ಮಂಗಳೂರು-ಪೂನಾ ನಡುವೆ ಕಾರ್ಯಾಚರಣೆ ಮಾಡಲಿವೆ. ಈ ಮಾರ್ಗದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದ್ದು, ಅಧಿಕೃತ ಸಂಚಾರ ಕಾರ್ಯ ಆರಂಭಿಸುತ್ತಿದೆ.
ಬಸ್ ವಿಶೇಷತೆಗಳು:ಈ ಹೊಸ ಬಸ್ 15 ಮೀಟರ್ ಉದ್ದವಿದೆ. 40 ಆಸನಗಳು 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವ ನೀಡುತ್ತದೆ. KSRTC ವೋಲ್ವೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ. ಈ ವಾಹನದ ಮುಂಭಾಗವು ಏರೋಡೈನಾಮಿಕ್ ಮೇರುಕೃತಿಯ ಭಾಗವಾಗಿದೆ, ವೇಗದ ಸಂಚಾರದಲ್ಲಿ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ, ಇಂಧನದ ಉಳಿತಾಯಕ್ಕೆ ಕಾರಣವಾಗುತ್ತದೆ.
ಹೊಸದಾಗಿ ವಿನ್ಯಾಸಗೊಳಿಸಿದ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿರುವ ಈ ವಾಹನವು ಪ್ರಯಾಣಿಕರಿಗೆ ವಿಹಂಗಮ ನೋಟದ ವೈಭವ ನೀಡುತ್ತದೆ. ವಾಹನವು ಉತ್ತಮ ಕಾರ್ಯಕ್ಷಮತೆ ಜೊತೆಗೆ ಐಷಾರಾಮಿ ಗುಣಗಳನ್ನು ಹೊಂದಿದ್ದು, ವಾಹನದ ಹೊರಭಾಗದ ಭವ್ಯತೆಗೆ V-ಆಕಾರದ ಹೆಡ್-ಲೈಟ್ಗಳು ವಿಶಿಷ್ಟವಾದ ಸೊಬಗು ನೀಡುತ್ತದೆ. ಹೊಸ ಸುಧಾರಿತ PX ಸಸ್ಪೆನ್ಶನ್ ಸ್ಟೀರಿಂಗ್ ಸ್ಥಿರತೆ ಮತ್ತು ನಿರ್ವಹಣೆಯನ್ನು ಹೊಂದಿದ್ದು ಇದು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ. ಎಬಿಎಸ್, ಎಂಜಿನ್ ಬ್ರೇಕ್, ಹಿಲ್ ಸ್ಟಾರ್ಟ್ ನೆರವು, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಇವಿಎಸ್ಸಿ) ಸೇರಿದಂತೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಈ ವಾಹನವು ಹೊಂದಿದೆ.
ಇದನ್ನೂ ಓದಿ:Watch.. ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಂದಿಳಿದ ಲೋಹದ ಹಕ್ಕಿ