ಕರ್ನಾಟಕ

karnataka

ETV Bharat / state

ಅಂತರ ನಗರ ಇ - ಬಸ್ ಸೇವೆಗೆ ಮುನ್ನುಡಿ ಬರೆದ ಕೆಎಸ್​ಆರ್​​​ಟಿಸಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ಮೊದಲ ಟ್ರಿಪ್​ಗೆ ಪ್ರಯಾಣಿಕರು ಫುಲ್ ಖುಷ್ - electrical vehicle evolution

ಪರಿಸರ ಸ್ನೇಹಿ ಸಾರಿಗೆಯಾಗಿ ಪರಿವರ್ತನೆಯಾಗುವ ಮೊದಲ ಹೆಜ್ಜೆ ಇಟ್ಟ ಕೆಎಸ್​ಆರ್​​ಟಿಸಿ - ಎಲೆಕ್ಟ್ರಿಕ್ ಬಸ್ ಪ್ರಯಾಣದ ಅನುಭವಕ್ಕೆ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ - ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಬಸ್​ಗೆ ಸ್ವಾಗತ.

ksrtc-has-introduced-inter-city-e-bus-service
ಅಂತರ ನಗರ ಇ-ಬಸ್ ಸೇವೆಗೆ ಮುನ್ನುಡಿ ಬರೆದ ಕೆ.ಎಸ್​.ಆರ್​.ಟಿ.ಸಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ಮೊದಲ ಟ್ರಿಪ್​ಗೆ ಪ್ರಯಾಣಿಕರು ಫುಲ್ ಖುಷ್

By

Published : Jan 16, 2023, 5:09 PM IST

Updated : Jan 16, 2023, 7:16 PM IST

ಅಂತರ ನಗರ ಇ - ಬಸ್ ಸೇವೆಗೆ ಮುನ್ನುಡಿ ಬರೆದ ಕೆಎಸ್​ಆರ್​​​ಟಿಸಿ

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಥಮ ಅಂತರ - ನಗರ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಚಾಲನೆ ಯಶಸ್ವಿಯಾದ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಬೆಂಗಳೂರು ಮೈಸೂರು ನಡುವೆ ಮೊದಲ ಇ - ಬಸ್ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ. ಪರಿಸರ ಸ್ನೇಹಿ ಸಾರಿಗೆಯಾಗಿ ಪರಿವರ್ತನೆಯಾಗುವ ಮೊದಲ ಹೆಜ್ಜೆಯನ್ನು ಸಾರಿಗೆ ಸಂಸ್ಥೆ ಇರಿಸಿದ್ದು, ರಾಜ್ಯ ರಸ್ತೆ ಸಾರಿಗೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತ ಮೊದಲ ಇವಿ ಬಸ್ ಮೈಸೂರು ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ತಲುಪಿಸಿದ್ದು, ಎಲೆಕ್ಟ್ರಿಕ್ ಬಸ್ ಪ್ರಯಾಣದ ಅನುಭವಕ್ಕೆ ಪ್ರಯಾಣಿಕರು ಭರ್ಜರಿ ರೆಸ್ಪಾನ್ಸ್ ಕೊಟ್ಟಿದ್ದಾರೆ. ದೇಶದ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಇವಿ ಬಸ್​ಗಳ ಸಂಚಾರಕ್ಕೆ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಬಹುನಿರೀಕ್ಷಿತ ಅಂತರ ನಗರ ಇ-ಬಸ್ ಸೇವೆಗೆ ಸದ್ದಿಲ್ಲದೇ ಕೆಎಸ್ಆರ್​ಟಿಸಿ ಚಾಲನೆ ನೀಡಿದೆ.

ಮೈಸೂರಿಗೆ ತೆರಳಲು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿರಿಗೆ ಗುಲಾಬಿ ಹೂ ನೀಡುವ ಮೂಲಕ ಇವಿ ಬಸ್​ಗೆ ಸ್ವಾಗತಿಸಲಾಯಿತು. ಒಟ್ಟು 30 ಪ್ರಯಾಣಿಕರನ್ನು ಹೊತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಮ್ಮೆಯ ಇವಿ ಪವರ್ ಪ್ಲಸ್ ಒಲೆಕ್ಟ್ರಾ ಬಸ್ 7.35ಕ್ಕೆ ಹೊರಟು 9.45ಕ್ಕೆ ಮೈಸೂರು ಬಸ್ ನಿಲ್ದಾಣ ತಲುಪಿತು. ಇದು ರಾಜ್ಯದ ಮೊದಲ ಅಂತರ ನಗರ ವಿದ್ಯುತ್ ಚಾಲಿತ ಬಸ್ ಸಂಚಾರ ಎನ್ನುವ ದಾಖಲೆಗೂ ಪಾತ್ರವಾಯಿತು.

ಪರಿಸರ ಸ್ನೇಹಿ ಬಸ್:ವಿದ್ಯುತ್ ಬಸ್​ಗಳಲ್ಲಿ ಪ್ರಯಾಣಿಸಿದ ಮೊದಲ ಅನುಭವವನ್ನೂ ಪಡೆದುಕೊಂಡ ಪ್ರಯಾಣಿಕರು. ಇ - ಬಸ್​ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಭವಿಷ್ಯದ ಸಾರಿಗೆ ಸೇವೆ ಆರಂಭಿಸಿರುವ ಕೆಎಸ್ಆರ್​ಟಿಸಿ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಇವಿ ಬಸ್ ಸೇವೆಗೆ ಶುಭ ಕೋರಿದರು. ಜೈವಿಕ ಇಂಧನ ಬಳಕೆಗೆ ಉತ್ತೇಜನ ನೀಡುತ್ತಲೇ ಪರಿಸರ ಸ್ನೇಹಿ ಬಸ್ ಸಂಚಾರಕ್ಕೆ ಒತ್ತು ನೀಡಿದ್ದ ಕೆಎಸ್ಆರ್​ಟಿಸಿ ಇಂದು ವಿದ್ಯುತ್ ಚಾಲಿತ ಬಸ್ ಸೇವೆಗೆ ಚಾಲನೆ ನೀಡುವ ಮೂಲಕ ಶೂನ್ಯ ಮಾಲಿನ್ಯದ ಸಾರಿಗೆ ಸೇವೆ ಒದಗಿಸುವ ಯೋಜನೆಗೆ ಮುನ್ನುಡಿ ಬರೆದಿದೆ.

ರಾಜ್ಯ ಸರ್ಕಾರದಿಂದ ಇವಿ ಪಾಲಿಸಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ವಾಯುವಾಲಿನ್ಯಕ್ಕೆ ವಾಹನಗಳ ಕೊಡುಗೆ ಪ್ರಮುಖವಾಗಿದ್ದು, ರಾಜ್ಯದಲ್ಲಿಯೂ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಹೊಸದಾಗಿ ಇವಿ ಪಾಲಿಸಿ ತರುತ್ತಿದೆ. ಅದಕ್ಕೂ ಮೊದಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಸಮೂಹ ಸಾರಿಗೆ ವ್ಯವಸ್ಥೆಗೆ ಇವಿ ಪರಿಚಯ ಮಾಡಿದ್ದು, ಇವಿ ಉತ್ತೇಜನಕ್ಕೆ ಕ್ರಾಂತಿಕಾರಕ ಹೆಜ್ಜೆ ಇರಿಸಿದೆ.

ಸದ್ಯ ದ್ಚಿಚಕ್ರ ವಾಹನ, ತ್ರಿಚಕ್ರ ವಾಹನಗಳಲ್ಲಿ ಇವಿ ಬಳಕೆ ಹೆಚ್ಚಾಗುತ್ತಿದ್ದು, ಕಾರುಗಳ ಮಾದರಿಯಲ್ಲಿಯೂ ಇದೀಗ ಇವಿ ಬಳಕೆ ಆರಂಭಗೊಂಡಿದೆ. ಆದರೆ, ದೊಡ್ಡ ಮಟ್ಟದಲ್ಲಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳಲ್ಲಿ ಇವಿ ಬಳಕೆ ಬಗ್ಗೆ ಇನ್ನು ಅಷ್ಟಾಗಿ ಜಾಗೃತಿ ಮೂಡಿಲ್ಲ ಇಂತಹ ಸಂದರ್ಭದಲ್ಲಿ ಕೆಎಸ್ಆರ್​ಟಿಸಿ ತನ್ನ ಅಂತರ ನಗರ ಸೇವೆಗೆ ಇವಿ ಬಸ್ ಬಳಕೆ ಆರಂಭಿಸುವ ಮೂಲಕ ಸಾರಿಗೆ ಬಸ್​ಗಳನ್ನೂ ಇವಿಗಳನ್ನಾಗಿ ಪರಿವರ್ತಿಸುವುದಕ್ಕೆ ಚಾಲನೆ ನೀಡಿದೆ.

ಹಂತ ಹಂತವಾಗಿ ಮತ್ತಷ್ಟು ಬಸ್​ಗಳನ್ನು ರಸ್ತೆಗಿಳಿಸುವ ಚಿಂತನೆ: ಸದ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದು, ಹಂತ ಹಂತವಾಗಿ ಮತ್ತಷ್ಟು ಬಸ್​ಗಳನ್ನು ರಸ್ತೆಗಿಳಿಸುವ ಚಿಂತನೆ ನಡೆಸಿದೆ. ಕೆಎಸ್ಆರ್​ಟಿಸಿ ಯಲ್ಲಿ 8,400 ಡೀಸೆಲ್ ಚಾಲಿತ ಬಸ್​ಗಳಿದ್ದು, ಅಂತರ ನಗರ ಸಾರಿಗೆ ಅಂತರ ರಾಜ್ಯ ಸಾರಿಗೆ ಸೇವೆ ಒದಗಿಸುತ್ತಿದೆ. ಇನ್ಮುಂದೆ ಹೊಸ ಬಸ್​ಗಳ ಖರೀದಿ ವೇಳೆ ವಿದ್ಯುತ್ ಚಾಲಿತ ಬಸ್​ಗಳನ್ನೂ ಗಮನದಲ್ಲಿರಿಸಿಕೊಂಡೇ ಖರೀದಿ ಪ್ರಕ್ರಿಯೆ ನಡೆಸಲಿದೆ.

ನಿರ್ಮಾಣ ಪ್ರಗತಿಯಲ್ಲಿರುವ ಚಾರ್ಚಿಂಗ್​ ಕೇಂದ್ರಗಳು: ಆರಂಭದಲ್ಲಿ ಹತ್ತಿರದ ಜಿಲ್ಲೆಗಳ ನಡುವೆ ವಿದ್ಯುತ್ ಚಾಲಿತ ಬಸ್​ಗಳ ಸೇವೆ ಆರಂಭಿಸಲಿದ್ದು, ನಂತರ ಹಂತ ಹಂತವಾಗಿ ಇ-ಬಸ್​ಗಳ ಕ್ಷಮತೆ ಆಧಾರಿಸಿ ದೂರದ ಜಿಲ್ಲೆಗಳ ನಡುವೆಯೂ ಇ-ಬಸ್​ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರ ನಿರ್ಮಾಣ ಪ್ರಗತಿಯಲ್ಲಿದೆ, ಆ ಕಾಮಗಾರಿ ಮುಗಿಯುತ್ತಿದ್ದಂತೆ ಹಂತ ಹಂತವಾಗಿ ಇ-ಬಸ್ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ದ್ರಾಕ್ಷಾರಸ ಮೇಳ: ಕಣ್ಮನ ಸೆಳೆದ ತರಹೇವಾರಿ ವೈನ್​​​

Last Updated : Jan 16, 2023, 7:16 PM IST

ABOUT THE AUTHOR

...view details