ಬೆಂಗಳೂರು: ರಾಜ್ಯ ವಿಧಾನಮಂಡಲದಲ್ಲಿ ಕಾಗದ ರಹಿತ ಆಡಳಿತ ವ್ಯವಸ್ಥೆ ತರುವ ಉದ್ದೇಶದ ಇ-ವಿಧಾನ್ ಯೋಜನೆ ಹೆಸರಲ್ಲಿ ಅಧಿಕಾರಿಗಳು 254 ಕೋಟಿ ರೂಪಾಯಿ ಹಗರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳ ಮಟ್ಟದಲ್ಲಿ 254 ಕೋಟಿ ರೂಪಾಯಿ ಮೊತ್ತದ ಹಗರಣ ಮಾಡಲು ಮುಂದಾಗಿದ್ದು, ಈ ಕುರಿತು ಮೇ 5 ಹಾಗೂ 7 ರಂದು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ನಂತರ ಸ್ಪೀಕರ್ ಅವರನ್ನು ಭೇಟಿ ಮಾಡಿಯೂ ಈ ವಿಚಾರವಾಗಿ ಮನವಿ ಮಾಡಿದ್ದೆ ಎಂದರು.
ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಮಾತನಾಡಿದರು ಜೇಬು ತುಂಬಿಸಿಕೊಳ್ಳುವ ಪ್ರಯತ್ನ:ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಮುಖ್ಯಸ್ಥರಾಗಿ ಸದನದ ಹಣವನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸಾರ್ವಜನಿಕರ ವಿರೋಧದ ನಡುವೆಯೂ ಅಧಿಕಾರಿಗಳು ವಿಧಾನಸಭೆಯ ಸಚಿವಾಲಯಗಳಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ತರುವ ಜವಾಬ್ದಾರಿಯನ್ನು ಕಿಯೋನಿಕ್ಸ್ ಎಂಬ ಖಾಸಗಿ ಕಂಪನಿಗೆ ನೀಡುವ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ಆರೋಪಿಸಿದರು.
2017-18ರಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಆಯ-ವ್ಯಯದಲ್ಲಿ ಕರ್ನಾಟಕ ವಿಧಾನಮಂಡಲದಲ್ಲಿ ನಗದು ರಹಿತ ಯೋಜನೆಯ ಇ-ವಿಧಾನ ಕಾರ್ಯಕ್ರಮ ಜಾರಿಗೊಳಿಸಲು ಪ್ರಾಥಮಿಕವಾಗಿ ಮೂಲಭೂತ ಸೌಕರ್ಯಗಳಿಗೆ 20 ಕೋಟಿ ರೂಪಾಯಿಗಳ ಬಿಡುಗಡೆ ಮತ್ತು ಈ ಯೋಜನೆಗೆ 250 ಕೋಟಿಗಳ ಅನುದಾನ ಘೋಷಣೆ ಮಾಡಿತ್ತು. ನಂತರ ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ವಿಧ ಎಂಬ ಉದ್ದೇಶದಿಂದ ಎಲ್ಲ ಕಡೆ ಒಂದೇ ರೀತಿಯ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಅಂದರೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಕ ಮೇವಾ ಎಂಬ ಯೋಜನೆ ಘೋಷಿಸಿದ್ದರು.
ಯಾವ ರಾಜ್ಯಗಳು ಕಾಗದ ರಹಿತ ವ್ಯವಸ್ಥೆ ಜಾರಿಗೆ ಮುಂದೆ ಬರುತ್ತವೋ ಆ ರಾಜ್ಯಗಳಿಗೆ 60:40 ಅನುದಾನದ ನೀಡಲು ತೀರ್ಮಾನಿಸಲಾಗಿತ್ತು. ಅದಕ್ಕೆ ಅನುಗುಣವಾಗಿ 2018ರಲ್ಲಿ ಆಗಿನ ಮುಖ್ಯಕಾರ್ಯದರ್ಶಿಗಳು ವಿಜಯ್ ಭಾಸ್ಕರ್ ಅವರು ಕೇಂದ್ರಕ್ಕೆ ಪತ್ರ ಬರೆದು ಈ ಯೋಜನೆ ಜಾರಿಗೆ ಆಸಕ್ತಿ ಇದ್ದು, ಇದರ ಡಿಪಿಆರ್ ಕಳುಹಿಸಿ, ಕೇಂದ್ರದ ಶೇ.60ರಷ್ಟು ಅನುದಾನ ಬಳಸಿಕೊಳ್ಳುವುದಾಗಿ ತಿಳಿಸಲಾಗುತ್ತದೆ. ನಂತರ ರಾಜ್ಯ ಸರ್ಕಾರಕ್ಕೆ ಕೇಂದ್ರ ಪತ್ರ ಬರೆದು ಈ ಯೋಜನೆಯ ಕಾರ್ಯಾಗಾರ ಏರ್ಪಡಿಸಲಾಗಿದ್ದು, ನಿಮ್ಮ ಸಚಿವಾಲಯದ ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ತಿಳಿಸಲಾಗುತ್ತದೆ ಎಂದರು.
ಇದಕ್ಕೆ ಅನುಗಣವಾಗಿ ಉಭಯ ಸದನಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ. ನಂತರ ಹಲವು ವಿಚಾರ ಸಂಕಿರಣ ನಡೆದಿದ್ದು, ಕಾಗೇರಿ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಆಗ ಪರಿಷತ್ ಸಭಾಧ್ಯಕ್ಷರಾಗಿದ್ದ ಹೊರಟ್ಟಿ ಅವರು ಭಾಗವಹಿಸಿದ್ದರು. ಈ ಸಮ್ಮೇಳನದ ನಂತರ ಸ್ಪೀಕರ್ ಅವರು ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಮೇವಾ ಯೋಜನೆ ಜಾರಿ ಹಾಗೂ ಅದರ ನಿರ್ವಹಣೆ ಮಾಡಲು ಉನ್ನತ ಮಟ್ಟದ ಸಮಿತಿ ಮಾಡಿತ್ತು.
2018 ರ ಮೇ 8ರಲ್ಲಿ ವಿಧಾನಮಂಡಲದ ಸಚಿವಾಲಯದ ಅಧಿಕಾರಿಗಳು ಹಿಮಾಚಲ ಪ್ರದೇಶದ ವಿಧಾನಸಭಾ ಸಚಿವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಕಾಗದ ರಹಿತ ಆಡಳಿತದ ಅಧ್ಯಯನ ಮಾಡಿ, ಯೋಜನೆ ಮತ್ತು ಇದರ ತಂಡ ಜ್ಞಾನ ಸಂಬಂಧ ಸಭಾಧ್ಯಕ್ಷರಿಗೆ ವರದಿ ಸಲ್ಲಿಕೆ ಮಾಡಿದೆ. 254 ಕೋಟಿ ರೂ. ಮೊತ್ತದ ಯೋಜನೆಗೆ ಸುಮಾರು 152 ಕೋಟಿ ರೂ. ಕೇಂದ್ರದಿಂದ ಅನುದಾನ ಬರುತ್ತಿತ್ತು. ರಾಜ್ಯ ಸರ್ಕಾರ ಕೇವಲ 101 ಕೋಟಿ ರೂ. ಮಾತ್ರ ನೀಡಬೇಕಾಗಿತ್ತು. ಆದರೆ ಈ ಮೇವಾ ಯೋಜನೆ ಜಾರಿ ಮಾಡಿದರೆ ಅಧಿಕಾರಿಗಳ ಜೇಬು ತುಂಬುವುದಿಲ್ಲ ಎಂಬ ಉದ್ದೇಶದಿಂದ ವಿಧಾನಸಭೆ ಸ್ಪೀಕರ್ ಪರಿಷತ್ತಿನ ಸಭಾಪತಿಗಳ ದಾರಿ ತಪ್ಪಿಸಿ ಇದನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ ಎಂದು ದೂರಿದರು.
ಕೇಂದ್ರದಿಂದ ಬೇಗ ಅನುದಾನ ಪಡೆಯಬಹುದು: ವಿಧಾನಸಭೆಯಲ್ಲೇ ಈ ರೀತಿ ಹಗರಣ ನಡೆದರೆ ಬೇರೆ ಸಚಿವಾಲಯಗಳ ಪರಿಸ್ಥಿತಿ ಏನು? ಮೇವಾ ನಿಮ್ಮದೇ ಸರ್ಕಾರದ ಯೋಜನೆಯಾಗಿದ್ದು, ಅದನ್ನು ಬಳಸಿಕೊಳ್ಳಬೇಕು. ಖಾಸಗಿಯವರಿಗೆ ಅವಕಾಶ ನೀಡಬಾರದು. ರಾಜೀವ್ ಚಂದ್ರಶೇಖರ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಸಚಿವಾಲಯದ ಹಾಗೂ ಪ್ರಹ್ಲಾದ್ ಜೋಶಿ ಅವರ ಬಳಿ ಇರುವ ಸಂಸದೀಯ ವ್ಯವಹಾರಗಳ ಸಮಿತಿ ಅಡಿಯಲ್ಲಿ ಈ ಯೋಜನೆ ಬರಲಿದ್ದು, ರಾಜ್ಯ ಸರ್ಕಾರ ಮೇವಾ ಯೋಜನೆ ಜಾರಿಗೆ ಮುಂದಾದರೆ ಕೇಂದ್ರದಿಂದ ಬೇಗ ಅನುದಾನ ಪಡೆಯಬಹುದು ಎಂದು ಹೇಳಿದರು.
ಸ್ಪೀಕರ್ ಗಮನಕ್ಕೆ ಈ ವಿಚಾರ ಬಂದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರದ ಬಗ್ಗೆ ತಮಗೆ ಮಾಹಿತಿ ಇದೆಯೋ ಇಲ್ಲವೋ ಎಂದು ಸ್ಪೀಕರ್ ಅವರೇ ಹೇಳಬೇಕು. ಅವರ ಮೂಗಿನ ಕೆಳಗೆ ಇಷ್ಟು ದೊಡ್ಡ ಹಗರಣ ನಡೆಯುತ್ತಿದೆ. ಅವರ ಸಂವಿಧಾನಾತ್ಮಕ ಹುದ್ದೆಗೆ ಗೌರವ ನೀಡುತ್ತಾ ನಾವು ಅವರ ಮೇಲೆ ಆರೋಪ ಮಾಡುತ್ತಿಲ್ಲ. ಅವರು ಸಾರ್ವಜನಿಕ ಹಣವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಈ ಕಾರಣಕ್ಕೆ ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಒತ್ತಾಯಿಸಿದರು.
ಓದಿ:ಪಠ್ಯ ಪುಸ್ತಕ ವಿವಾದ.. ಸಮಿತಿ ತೆಗೆದಿದ್ದೇನು, ಮರುಸೇರ್ಪಡೆ ಆಗಿದ್ದೇನು? ಸರ್ಕಾರದ ಸ್ಪಷ್ಟನೆ ಹೀಗಿದೆ