ಬೆಂಗಳೂರು:ಅಪರಾಧ ಮಾಡುವವರು ಇವರು. ದೌರ್ಜನ್ಯ ಮಾಡುವವರು ಇವರು. ಆದರೆ ಅದನ್ನ ಬೇರೆಯವರ ಮೇಲೆ ಆರೋಪ ಹೊರಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಸಿ.ಡಿ ಪ್ರಕರಣದ ವಿಚಾರವಾಗಿ ಬಿಜೆಪಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಮಾಡಿರುವ ಟ್ವೀಟ್ನ ನಾನು ಖಂಡಿಸುತ್ತೇನೆ. ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟಾ ಅನ್ನುವ ರೀತಿ ಇದೆ. ಪ್ರಕರಣದ ದಾರಿ ತಪ್ಪಿಸಲು ಬಿಜೆಪಿ ಈ ರೀತಿಯ ಟ್ವೀಟ್ ಮಾಡಿದೆ. ಸಿ.ಡಿ ಬಿಡುಗಡೆ ಮಾಡಿದವರು ಯಾರು ಎಂದು ಗೊತ್ತಿದ್ದರೆ ನೇರವಾಗಿ ಬಿಜೆಪಿ ಹೇಳಲಿ. ಅದು ಬಿಟ್ಟು ಜೈಲಿಗೆ ಹೋಗಿ ಬಂದವರು ಸಿ.ಡಿ ಬಿಡುಗಡೆ ಮಾಡಿಸಿದ್ದಾರೆ ಅಂತಾ ಹೇಳುವುದು ಏಕೆ ಎಂದು ಪ್ರಶ್ನಿಸಿದರು.
ಯಾರು ಎಂದು ನೇರವಾಗಿ ಹೇಳಲಿ. ಪ್ರಕರಣದ ದಾರಿ ತಪ್ಪಿಸಲು ನಮ್ಮ ಪಕ್ಷದ ನಾಯಕರ ಮೇಲೆ ಬಿಜೆಪಿ ಆರೋಪ ಮಾಡುತ್ತಿದೆ. ಮೊದಲಿಂದಲೂ ನಮ್ಮ ಪಕ್ಷದ ನಾಯಕರನ್ನ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಇ.ಡಿ, ಸಿಬಿಐ ಮೂಲಕ ಟಾರ್ಗೆಟ್ ಮಾಡಿಸಿದರು. ಈಗ ಎಸ್ಐಟಿ ಮೂಲಕ ಮಾಡಲು ಹೊರಟಿದ್ದಾರೆ. ಎಸ್ಐಟಿ ಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಹಿಂದಿನ ಎಸ್ಐಟಿ ತನಿಖೆಗಳನ್ನ ನೋಡಿದರೆ, ಎಸ್ಐಟಿ ನಂಬಿಕೆಗೆ ಅರ್ಹವಾಗಿಲ್ಲ. ಪ್ರಕರಣದ ಸತ್ಯ ಹೊರಬರಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಓದಿ : ಕುಡಿಯುವ ನೀರಿಗಾಗಿ ಎಲ್ಲ ತಾಲೂಕುಗಳಿಗೆ 25 ರಿಂದ 50 ಲಕ್ಷ ರೂ.ಬಿಡುಗಡೆ : ಸಚಿವ ಕೆ ಎಸ್ ಈಶ್ವರಪ್ಪ
ಬಿಜೆಪಿ ಟ್ವೀಟ್ ನಲ್ಲಿ ಏನಿದೆ..? :ಇಂದು ಟ್ವೀಟ್ ಮಾಡಿರುವ ಬಿಜೆಪಿ, 'ಆ' ಮಹಾನಾಯಕ ಬಗ್ಗೆ ಮಾಹಿತಿ ಬಿಚ್ಚಿಟ್ಟಿದೆ. ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಬಂದಿರುವ ವ್ಯಕ್ತಿ ಇದ್ದಾನೆ. ಭ್ರಷ್ಟಾಚಾರ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದಿದ್ದಾರೆ. ಆ ರೀತಿ ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ..? ಎಂದು ಕೇಳಿದೆ.