ಕರ್ನಾಟಕ

karnataka

ETV Bharat / state

ಒಮಿಕ್ರೋನ್ ಬಗ್ಗೆ ಜನರು ಭಯಪಡಬೇಕಾಗಿಲ್ಲ, ನಮ್ಮ ರಾಜ್ಯಕ್ಕೆ ಇನ್ನೂ ಬಂದಿಲ್ಲ, ಬರೋದು ಇಲ್ಲ: ಡಿಕೆಶಿ

ಜನರಿಗೆ ಗಾಬರಿಪಡಿಸುವಂಥ ಕೆಲಸ ಆಗಬಾರದು. ಸರ್ಕಾರ ಮುಂಜಾಗ್ರತಾ ಕ್ರಮವಹಿಸಬೇಕು. ನಮ್ಮ ರಾಜ್ಯಕ್ಕೆ ಒಮಿಕ್ರೋನ್ ಇನ್ನೂ ಬಂದಿಲ್ಲ, ಬರೋದು ಇಲ್ಲ. ಯಾರೂ ಆತಂಕಗೊಳ್ಳುವುದು ಬೇಡ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

By

Published : Nov 30, 2021, 7:27 PM IST

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು:ಒಮಿಕ್ರೋನ್​ ಬಗ್ಗೆ ರಾಜ್ಯದ ಜನರು ಭಯಪಡಬೇಕಾಗಿಲ್ಲ. ನಮ್ಮ ರಾಜ್ಯಕ್ಕೆ ಅದಿನ್ನೂ ಬಂದಿಲ್ಲ, ಬರೋದು ಇಲ್ಲ. ಯಾರೂ ಆತಂಕಗೊಳ್ಳುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಡಿನ ಜನತೆಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ರಾಜ್ಯಕ್ಕೆ ಮತ್ತೆ ಬರುವುದಿಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜನರಿಗೆ ಜಾಗೃತಿ ಮೂಡಿಸಬೇಕು. ಬರೀ ಕೇರಳ ಅಂತ ಇದ್ದಾರೆ, ಆದ್ರೆ ಎಲ್ಲಾ ಕಡೆ ಗಮನಹರಿಸಬೇಕು. ಜನರಿಗೆ ಗಾಬರಿಪಡಿಸುವಂಥ ಕೆಲಸ ಆಗಬಾರದು. ಸರ್ಕಾರ ಮುಂಜಾಗ್ರತಾ ಕ್ರಮವಹಿಸಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯುತ್ತೆ, ಅದಕ್ಕೆ ಅಧಿವೇಶನ ನಡೆಯಬಾರದು ಅಂತಾರೆ ಅಷ್ಟೇ. ಬೆಳಗಾವಿ ಅಧಿವೇಶನ ನಡೆಸಬೇಕು, ಯಾವುದೋ ಕಾರಣ ನೀಡಿ ಮುಂದೂಡುವುದು ಸರಿಯಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವ್ಯಾಕ್ಸಿನ್ ಪ್ರಮಾಣ ಕಡಿಮೆ ಆಗಿರುವ ವಿಚಾರ ಕುರಿತು ಮಾತನಾಡಿ, ಬಿಜೆಪಿಯೇತರ ರಾಜ್ಯಗಳು ಅಂತಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ವ್ಯಾಕ್ಸಿನ್ ಕಾರ್ಯಕ್ರಮ ಪೂರ್ಣಗೊಂಡಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೇವಲ ವ್ಯಾಕ್ಸಿನ್ ಅಷ್ಟೇ ಅಲ್ಲ, ಟ್ಯಾಕ್ಸ್ ಕಲೆಕ್ಷನ್ ಕೂಡ ಕಡಿಮೆ ಆಗಿದೆ. ಈ ಬಗ್ಗೆ ಅಂಕಿ-ಅಂಶಗಳ ಸಮೇತ ನಾನು ಮಾಧ್ಯಮಗಳ ಮುಂದೆ ಬರ್ತೇನೆ ಎಂದು ಡಿಕೆಶಿ ಹೇಳಿದ್ರು.

ಮದುವೆ ಕಾರ್ಯಕ್ರಮಗಳಲ್ಲಿ ಸಿಎಂ ಬೊಮ್ಮಾಯಿ ಹೆಚ್ಚು ಭಾಗಿಯಾಗ್ತಿರುವ ವಿಚಾರ ಮಾತನಾಡಿ, ಅರಿಷಿಣ ಒಬ್ಬರ ಕೈಯಲ್ಲಿದೆ, ಅಕ್ಕಿಕಾಳು ಒಬ್ಬರ ಕೈಯಲ್ಲಿದೆ. ಅವೆರಡು ಸೇರಿಸಿ ಆಶೀರ್ವಾದ ಮಾಡುತ್ತಿದ್ದಾರೆ. ಮಾಡಲಿ ಸುಮ್ಮನಿರಿ ಅಂತ ಮಾರ್ಮಿಕವಾಗಿ ನುಡಿದರು.

ಸಿದ್ದರಾಮಯ್ಯ ಕುಡುಕ ಎಂಬ ಈಶ್ವರಪ್ಪ ಹೇಳಿಕೆ ಕುರಿತು ವ್ಯಂಗ್ಯವಾಡಿದ ಡಿ ಕೆ ಶಿವಕುಮಾರ್, ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇದ್ಯಾಲ್ಲ ಅದೇನದು..? ಮಹಿಷಾಸುರ.. ಹಾ.. ಹಿಡ್ಕಂಡಿದಾರಲ್ಲ.. ಅದನ್ನೊಂದು ಕೊಟ್ಟಿಡಿ ಕೈಗೆ ಎಂದರು.

ಸಚಿವ ಮುರುಗೇಶ್ ನಿರಾಣಿ ಸಿಎಂ ಎಂಬ ಈಶ್ವರಪ್ಪ ಹೇಳಿಕೆ ಹಿನ್ನೆಲೆ, ಇದು ಬರೀ ಚರ್ಚೆ ಮಾತ್ರವಲ್ಲ. ಅವರು ಬಿಜೆಪಿ ಹಿರಿಯರು, ಡಿಸಿಎಂ, ಬಿಜೆಪಿ ಅಧ್ಯಕ್ಷರಾಗಿದ್ದರು. ಚರ್ಚೆ ನಡೆಯುತ್ತಿರುವ ಬಗ್ಗೆ ಹೇಳಿದ್ದಾರೆ. ಒಂದು ಸಿಎಂ ಈಶ್ವರಪ್ಪನನ್ನು ಸಂಪುಟದಿಂದ ಡ್ರಾಪ್ ಮಾಡಬೇಕು. ಇಲ್ಲವಾದಲ್ಲಿ ಸಿಎಂ ರಾಜೀನಾಮೆ ಕೊಡಬೇಕು. ಸರ್ಕಾರದಲ್ಲಿ ಇದ್ದುಕೊಂಡೇ ಸಿಎಂ ಚೇಂಜ್​ ಮಾಡ್ತೇವೆ ಎಂದು ಅವರು ಹೇಳಿದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಬೊಮ್ಮಾಯಿ ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎಂದು ಹೇಳಿದ್ದಾರೆ. ಇಲ್ಲಿ ಸಿಎಂ ಚೇಂಜ್ ಮಾಡ್ತೇವೆ ಎಂದು ಹೇಳ್ತಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಟೀಕಿಸಿದರು.

For All Latest Updates

ABOUT THE AUTHOR

...view details