ಕರ್ನಾಟಕ

karnataka

ETV Bharat / state

ರಾಜಸ್ಥಾನ ಹಾಗೂ ದಿಲ್ಲಿಗೆ ಡಿಕೆಶಿ ಪ್ರವಾಸ: ರಾಷ್ಟ್ರೀಯ ನಾಯಕರ ಭೇಟಿ, ಸಮಾಲೋಚನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನಾಳೆ ಬೆಳಗ್ಗೆ ರಾಜಸ್ಥಾನ ಮತ್ತು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ರಾಜಸ್ಥಾನ ಕಾಂಗ್ರೆಸ್​​​​ನಲ್ಲಿ ಗೊಂದಲ ಉಂಟಾಗಿರುವ ನಡುವೆ ಡಿಕೆಶಿ ಪ್ರವಾಸ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​​​ ಭೇಟಿ ನಂತರ ದೆಹಲಿಗೆ ತೆರಳಿ ವರಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

By

Published : Aug 2, 2021, 3:28 PM IST

dk-shivakumar-delhi-and-rajasthan-tour
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿ ಹಾಗೂ ಜೈಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವರಸಿದ್ದಿವಿನಾಯಕ ದೇವಾಲಯದಲ್ಲಿರುವ ಡಿಕೆಶಿ ಇಂದು ಸಂಜೆ ನಗರಕ್ಕೆ ವಾಪಸ್​ ಆಗಿ ನಾಳೆ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಜೈಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಡಿಕೆ ಶಿವಕುಮಾರ ದೆಹಲಿ ಮತ್ತು ರಾಜಸ್ಥಾನ ಪ್ರವಾಸ

ಮಧ್ಯಾಹ್ನ ಜೈಪುರ ತಲುಪಲಿರುವ ಡಿಕೆಶಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ರಾಜಸ್ಥಾನ ರಾಜಕೀಯದಲ್ಲಿ ಇತ್ತೀಚೆಗೆ ಗೊಂದಲಗಳು ಹೆಚ್ಚಾಗಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ಅಂತರ ಹೆಚ್ಚಾಗುತ್ತಿದೆ. ಈ ಹಿಂದೆಯೂ ಪಕ್ಷ ಇಬ್ಭಾಗವಾಗುವ ಹಂತ ತಲುಪಿದಾಗ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿತ್ತು. ಇದೀಗ ಮತ್ತೆ ಸಮಸ್ಯೆ ಉಲ್ಬಣಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.

ಈ ಮಧ್ಯೆ ರಾಜಸ್ಥಾನ ಸಂಪುಟ ಸಂಪುಟ ಪುನಾರಚನೆ ನಡೆಸುವ ಕಸರತ್ತು ಆರಂಭವಾಗಿತ್ತು. ಸದ್ಯ ಮತ್ತೊಮ್ಮೆ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸು ಹೆಚ್ಚಾಗದಂತೆ ನೋಡಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡಬೇಕಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿ.ಕೆ. ಶಿವಕುಮಾರ್ ರಾಜಸ್ಥಾನ ಸಿಎಂ ಭೇಟಿಯೂ ಸಹ ಸಾಕಷ್ಟು ಕುತೂಹಲ ಮೂಡಿಸಿದೆ.

ದೆಹಲಿ ಭೇಟಿ

ಜೈಪುರದಿಂದ ಅಂದು ಸಂಜೆ ನಿರ್ಗಮಿಸಲಿರುವ ಡಿ.ಕೆ. ಶಿವಕುಮಾರ್ ದಿಲ್ಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ರಾತ್ರಿ ತಂಗಿ ಬುಧವಾರ ಬೆಳಗ್ಗೆ ಎಐಸಿಸಿ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ರಾಜಸ್ಥಾನ ರಾಜಕೀಯ ವಿದ್ಯಮಾನಗಳ ಕುರಿತು ಗೆಹ್ಲೋಟ್​​ ಜೊತೆ ನಡೆಸಿದ ಚರ್ಚೆಯ ವಿವರವನ್ನು ತಿಳಿಸುವ ಜೊತೆಗೆ ರಾಜ್ಯ ಕಾಂಗ್ರೆಸ್ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗೆ ಕೈಗೊಂಡಿರುವ ಕಾರ್ಯಕ್ರಮಗಳ ವರದಿ ಒಪ್ಪಿಸಲಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭ ಅವರು ಭೇಟಿಯಾಗುವ ಸಾಧ್ಯತೆ ಇದೆ.

ABOUT THE AUTHOR

...view details