ಬೆಂಗಳೂರು: ಕೆಪಿಎಸ್ಸಿ ಅಧಿಸೂಚಿಸಲಾದ ಗ್ರೂಪ್ 'ಸಿ' ಹುದ್ದೆಗಳಿಗೆ ನ.4 ಮತ್ತು 5 ರಂದು ಕನ್ನಡ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಅಭ್ಯರ್ಥಿಗಳ ಹಾಲ್ ಟಿಕೆಟ್ಗಳು ಈಗಾಗಲೇ ಆಯೋಗದ ವೆಬ್ಸೈಟ್ನಲ್ಲಿ ಲಭ್ಯ ಇವೆ. ಲೆಕ್ಕ ಸಹಾಯಕರು ಮತ್ತು ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳಿಗೆ ಒಂದೇ ಪರೀಕ್ಷೆ ಇರಲಿದೆ ಎಂದು ಕೆಪಿಎಸ್ಸಿ ತಿಳಿಸಿದೆ.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯು ಸಚಿವ ಪ್ರಿಯಾಂಕ ಖರ್ಗೆಗೆ ಪತ್ರ ಬರೆದು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 242 (RPC) ಮತ್ತು ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ 47 (RPC) ಹುದ್ದೆಗಳಿಗೆ ಸಾಮಾನ್ಯ ಪಠ್ಯ ಕ್ರಮ ಇರುವುದರಿಂದ ಎರಡೂ ಹುದ್ದೆಗಳನ್ನು ಸೇರಿಸಿ ಒಂದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸದರಿ ಪರೀಕ್ಷಾ ಫಲಿತಾಂಶವನ್ನು ಎರಡೂ ಹುದ್ದೆಗಳಿಗೆ ಪರಿಗಣಿಸುವುದರಿಂದ ಅರ್ಜಿ ಸಲ್ಲಿಸಿರುವ ಯಾವುದೇ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಆಯೋಗ ಮಾರ್ಚ್ 2023ರಲ್ಲಿ ಅಧಿಸೂಚಿಸಲಾದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 242 (RPC) ಮತ್ತು ಕಿರಿಯ ಲೆಕ್ಕ ಸಹಾಯಕರು 67 (RPC), ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ 47 (RPC) ಮತ್ತು ಸಹಕಾರ ಸಂಘಗಳ ನಿರೀಕ್ಷಕರ 53 (ಹೈ.ಕ) ಹುದ್ದೆಗಳಿಗೆ ಮುಂದಿನ ತಿಂಗಳು ನವೆಂಬರ್ 4 ರಂದು ಕನ್ನಡ ಭಾಷಾ ಪರೀಕ್ಷೆ ಹಾಗೂ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 242 (RPC), ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ 47 (RPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನವೆಂಬರ್ 5 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಂಬಂಧ ವೇಳಾಪಟ್ಟಿಯನ್ನು ಮೂರು ತಿಂಗಳ ಹಿಂದೆ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.