ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟ ಆರಂಭಿಸಿರುವ ಕಾಂಗ್ರೆಸ್ ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಅಭಿಯಾನ ಆರಂಭಿಸಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಬಿಜೆಪಿ ನಾಯಕರು 600ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಭರವಸೆ ಈಡೇರಿಸಿಲ್ಲ. ಅಧಿಕಾರದ ಹಸಿವು ಹೊಂದಿರುವ ಬಿಜೆಪಿ ಯಾವುದೇ ರೀತಿಯಲ್ಲಿ ಜನರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ರೂಪಿಸಿಯೇ ಇಲ್ಲ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ಭ್ರಷ್ಟ ಮುಖ್ಯಮಂತ್ರಿ: ಕೇವಲ ಕಮಿಷನ್ ಸರ್ಕಾರ ನಡೆಸುತ್ತಿದೆ. ಗುತ್ತಿಗೆದಾರರಿಂದ ಶೇ.40ರಷ್ಟು ಹಾಗೂ ಜನರಿಂದ ಮತ್ತು ಬಿಜೆಪಿ ಕಾರ್ಯಕರ್ತರಿಂದ ಶೇ.60ರಷ್ಟು ಕಮಿಷನ್ ಪಡೆಯುವ ಕಾರ್ಯ ಬಿಜೆಪಿ ಮಾಡುತ್ತಿದೆ. ಭ್ರಷ್ಟ ಹಾಗೂ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯನ್ನು ರಾಜ್ಯದ ಇತಿಹಾಸದಲ್ಲಿ ನಾವು ಇಂದು ಕಾಣುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಅಧಿಕಾರ ನೀಡುವಲ್ಲಿ ವಿಫಲರಾಗಿದ್ದಾರೆ.
ಐದು ವರ್ಷದ ಅಧಿಕಾರ ಅವಧಿಯಲ್ಲಿ ನಾವು ನೀಡಿದ ಎಲ್ಲ 165 ಭರವಸೆಯನ್ನ ಈಡೇರಿಸುವ ಜೊತೆಗೆ ಹೆಚ್ಚುವರಿ ಭರವಸೆಗಳನ್ನು ಸಹ ಈಡೇರಿಸಿದ್ದೇವೆ. ಹಲವು ಭಾಗ್ಯಗಳನ್ನು ನೀಡಿದ್ದು, ಇದು ದೇಶಕ್ಕೆ ಮಾದರಿ ಎನಿಸಿದೆ. ಆದರೆ, ಬಿಜೆಪಿ ನೀಡಿರುವ 600 ಭರವಸೆಗಳಲ್ಲಿ ಶೇ. 90ರಷ್ಟು ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂರಿದರು.
ಪ್ರಶ್ನಿಸುವ ಕಾರ್ಯ ಆರಂಭ: ರೈತರ ಸಾಲ ಮನ್ನಾ ಮಾಡುವ ಭರವಸೆ ಎಲ್ಲಿ ಈಡೇರಿದೆ?, ರೈತರಿಗೆ ಸಾಲ ನೀಡುವ ಕಾರ್ಯ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವ, ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡುವ, ಹಿಂದುಳಿದ ವರ್ಗದವರಿಗೆ ಸೌಲಭ್ಯ ಕಲ್ಪಿಸುವ ಕಾರ್ಯವು ಸೇರಿದಂತೆ ಹಲವು ಭರವಸೆಗಳು ಹಾಗೆಯೇ ಉಳಿದಿದ್ದು, ಯಾವಾಗ ಈಡೇರಿಸುತ್ತೀರಿ?, ರಾಜ್ಯದ ಪ್ರತಿಯೊಬ್ಬ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ನೀಡಿದ ಭರವಸೆಯನ್ನು ಯಾಕೆ ಈಡೇರಿಸಿಲ್ಲ ಎಂದು ಪ್ರಶ್ನಿಸುವ ಕಾರ್ಯ ಆರಂಭಿಸಬೇಕು. ರಾಜ್ಯದ ಎಲ್ಲಾ ಕಡೆ ಸರ್ಕಾರವನ್ನು ಪ್ರಶ್ನಿಸುವ ಕಾರ್ಯ ಆಗಬೇಕು ಎಂದು ಸುರ್ಜೇವಾಲ ವಿವರಿಸಿದರು.
ಪ್ರತಿದಿನ ಒಂದೊಂದು ಪ್ರಶ್ನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಬಿಜೆಪಿಯ ವಚನ ವಂಚನೆಯಾಗಿದೆ ಎಂಬ ಮಾತಿನ ಜೊತೆ ಅವರು ನೀಡಿದ ಪ್ರಣಾಳಿಕೆಯನ್ನು ಜನರ ಮುಂದೆ ಇಡುತ್ತಿದ್ದೇವೆ. ಇಂದಿನಿಂದ ಬಿಜೆಪಿಯಿಂದ ಉತ್ತರ ಕೇಳುತ್ತಿದ್ದೇವೆ. ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಾಗೂ ಮಾಧ್ಯಮದ ಮೂಲಕ ಪ್ರಶ್ನಿಸುವ ಕಾರ್ಯ ಆರಂಭಿಸುತ್ತಿದ್ದೇವೆ ಎಂದರು.
ನೀವು ಜನರಿಗೆ ನೀಡಿದ ವಚನವನ್ನು ಉಳಿಸಿಕೊಂಡಿದ್ದೀರಾ?, ಇಲ್ಲವಾ? ಎಂಬ ಪ್ರಶ್ನೆಯನ್ನು ಕೇಳುತ್ತೇವೆ. ನೀವು ಇದಕ್ಕೆ ಉತ್ತರ ನೀಡುವುದಲ್ಲದೆ ನಿಮ್ಮ ಆತ್ಮಸಾಕ್ಷಿಗೆ ಬೆಲೆ ಸಿಗುವಂತೆ ಮಾಡಿಕೊಳ್ಳಬೇಕು. ಬಿಜೆಪಿಯವರು ಸುಳ್ಳಿನ ಸರದಾರರು. 100 ಸಾರಿ ಒಂದು ಸುಳ್ಳನ್ನು ಹೇಳಿ ಸತ್ಯವಾಗಿಸುವ ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಬಳಿ ಕೇಳಲು ನಮ್ಮ ಹತ್ತಿರ ಸಾಕಷ್ಟು ಪ್ರಶ್ನೆಗಳಿದ್ದು ಪ್ರತಿದಿನ ಒಂದೊಂದು ಪ್ರಶ್ನೆ ಕೇಳುತ್ತೇವೆ ಎಂದು ಡಿಕೆಶಿ ಹೇಳಿದರು.
ನಿಮ್ಮ ಬಳಿ ಉತ್ತರ ಇದೆಯಾ?:ರೈತರಿಗೆ ನೀಡಿದ ಮಾತು ಈಡೇರಿಲ್ಲ. ರೈತರ ಆದಾಯ ದ್ವಿಗುಣಗೊಳಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಅದು ಈಡೇರಿಲ್ಲ. ಹಾಲಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಆದರೆ ಒಂದು ಲೀ.ನೀರಿನ ಬೆಲೆ ಅದಕ್ಕಿಂತಲೂ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಸಾಕಷ್ಟು ಉತ್ತೇಜನ ನೀಡಿದ್ದೆವು. ಮಹಿಳೆಯರಿಗೆ ನೀಡಿದ ಮಾತು ಈಡೇರಿಸಿ ಕೊಟ್ಟಿಲ್ಲ. ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಯಾಗಿಲ್ಲ. ಯುವಕರಿಗೆ ಹೊಸ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಿಲ್ಲ. ಹೊಸ ಯುಜಿಸಿ ಕಾಲೇಜುಗಳನ್ನು ಆರಂಭಿಸುತ್ತೇವೆ ಎಂದು ಹೇಳಿದ್ದೀರಿ ಅದು ಈಡೇರಿಲ್ಲ.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಿಕ್ಕಿಲ್ಲ. ನಾಡಿಗೆ ಸಿಗಬೇಕಾದ ಮಾನ್ಯತೆ ಸಹ ಸಿಗುತ್ತಿಲ್ಲ. ಅನ್ಯ ಭಾಷೆಗಳನ್ನು ನಾವು ವಿರೋಧಿಸುತ್ತಿಲ್ಲ ಆದರೆ, ಮಾತ್ರ ಭಾಷೆಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬ ಬೇಸರ ಇದೆ. ಇಂದು ನಾವು ಹೆಚ್ಚಿನ ಪಟ್ಟಿಗಳನ್ನು ಪ್ರಕಟಿಸುತ್ತಿಲ್ಲ. ಕಾಂಗ್ರೆಸ್ ನಾಯಕರು ಎಲ್ಲರೂ ಒಟ್ಟಾಗಿ ಕೇಳುತ್ತಿರುವ ಏಕೈಕ ಪ್ರಶ್ನೆ ನಮ್ಮ ಪ್ರಶ್ನೆಗೆ ನಿಮ್ಮ ಬಳಿ ಉತ್ತರ ಇದೆಯಾ? ಎಂಬುದು ಆಗಿದೆ. ನಿಮ್ಮ ಪ್ರಣಾಳಿಕೆ ವಂಚನೆಗಳ ಸರಮಾಲೆ. ಕರ್ನಾಟಕ ಭ್ರಷ್ಟಾಚಾರದ ರಾಷ್ಟ್ರ ರಾಜಧಾನಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.
ಶೇ.10ರಷ್ಟು ಭರವಸೆ ಈಡೇರಿಸಿಲ್ಲ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 2013ರಲ್ಲಿ ಅಧಿಕಾರಕ್ಕೆ ಬಂದ ನಾವು 165 ಭರವಸೆಗಳನ್ನ ಈಡೇರಿಸುವುದಾಗಿ ತಿಳಿಸಿದ್ದವು. ನಮ್ಮ ಐದು ವರ್ಷಗಳ ಅವಧಿಯಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, 2018ರಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ನಮ್ಮ ವಚನ ಎಂದು ಕೋಶ ವಾಕ್ಯದ ಅಡಿ ಬಿಜೆಪಿ ಭರವಸೆಗಳನ್ನ ನೀಡಿತ್ತು. ಸುಮಾರು 600 ವಚನಗಳನ್ನು ಈ ಪ್ರಣಾಳಿಕೆಯಲ್ಲಿ ನೀಡಿತ್ತು. ಇದರಲ್ಲಿ ಶೇ.10ರಷ್ಟು ಭರವಸೆಯನ್ನು ಸಹ ಈಡೇರಿಸಿಲ್ಲ ಎಂದು ಆರೋಪಿಸಿದರು.
ನುಡಿದಂತೆ ನಡೆಯಬೇಕು. ಜನರಿಗೆ ಮಾತು ಕೊಟ್ಟ ಮೇಲೆ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಬಿಜೆಪಿಯವರು ಶೇ.90ರಷ್ಟು ಜನರಿಗೆ ಮೋಸ ಮಾಡಿದ್ದಾರೆ. ಇದು ಜನರ ಭರವಸೆಯನ್ನ ಹುಸಿಗೊಳಿಸಿದಂತೆ ಆಗಿಲ್ಲವೇ? ಸ್ಪಷ್ಟವಾಗಿ ಹೇಳಬಹುದೆಂದರೆ ಇದು ಜನರಿಗೆ ಮಾಡಿರುವ ದ್ರೋಹ. ಇದು ವಚನಗಳ ವಂಚನೆ. ನಮ್ಮ ಪ್ರಶ್ನೆಗಳಿಗೆ ಬಿಜೆಪಿಯವರೇ ಉತ್ತರ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಕಮಿಷನ್ ಸರ್ಕಾರ ಎಂಬ ಬಿರುದು:ರಾಜ್ಯಕ್ಕೆ ಕೆಟ್ಟ ಹೆಸರು ತಂದರು. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಬಿರುದನ್ನ ನೀಡಿದರು. 5.40 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ಕುಲಗೆಡಿಸುತ್ತಿದ್ದಾರೆ. ದೇಶ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಇವರ ಸಂಪುಟ ಸದಸ್ಯರಲ್ಲಿ ಒಬ್ಬರಾದ ಮಾಧುಸ್ವಾಮಿ ಅವರೇ ಈ ಬಗ್ಗೆ ಸತ್ಯದ ಮಾತನ್ನು ಆಡಿದ್ದಾರೆ. ಈ ಸರ್ಕಾರದಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ನಮ್ಮ ಪ್ರಶ್ನೆಗಳಿಗೆ ನಿಮ್ಮ ಬಳಿ ಇದೆಯಾ ಉತ್ತರ ಎಂಬ ಅಭಿಯಾನವನ್ನು ಇದೇ ಉದ್ದೇಶಕ್ಕಾಗಿ ಮಾಡುತಿದ್ದೇವೆ ಎಂದರು.
ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದ ಎಂದು ಸುದ್ದಿ ಹಬ್ಬಿಸಿದ್ದರು. ಇಲ್ಲಿ ಶೇ.89 ರಷ್ಟು ಮಂದಿ ಮಾಂಸಹಾರಿಗಳೇ ಇದ್ದರೆ. ಅನಗತ್ಯ ಹಾಗೂ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಗಮನವನ್ನು ಬೇರೆ ಸೆಳೆಯಲು ಏನೋ ಬೇಕು ಅದನ್ನೆಲ್ಲ ಬಿಜೆಪಿ ಸರ್ಕಾರ ಮಾಡುತ್ತಿದೆ. ರಾಜ್ಯ ಉಳಿಯಬೇಕಾದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆ ಆಗಬೇಕಾದರೆ ಭಾರತೀಯ ಜನತಾ ಪಕ್ಷದ ಸರ್ಕಾರ ಹೋಗಬೇಕು. ನಾವು ಸತ್ಯವನ್ನ ಜನರ ಮುಂದೆ ಇಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಎಐಸಿಸಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ... ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ