ದೊಡ್ಡಬಳ್ಳಾಪುರ: ಸ್ಯಾಂಟ್ರೋ ರವಿಗೆ ಸರ್ಕಾರದಿಂದ ಯಾವುದೇ ವಿಶೇಷ ಆತಿಥ್ಯ ಕೊಟ್ಟಿಲ್ಲ. ಅವನೊಬ್ಬ ಕ್ರಿಮಿನಲ್, ಸೆರೆ ಸಿಕ್ಕಿದ್ದಾನೆ, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಇಂದು ಕುಮಾರಸ್ವಾಮಿ ಅವರು ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ಮಾಡಿದ ಆರೋಪಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಮುಖಂಡ ಸಾರಥಿ ಸತ್ಯ ಪ್ರಕಾಶ್ ಅವರು ತಾಲೂಕಿನ ಜನರ ನೆರವಿಗಾಗಿ ನೀಡಿರುವ ನಾಲ್ಕು ಉಚಿತ ಆಂಬ್ಯುಲೆನ್ಸ್ಗಳಿಗೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಗ್ರಾಮೀಣ ಜನರಿಗೆ ಉಚಿತ ಆರೋಗ್ಯ, ಉಚಿತ ಶಿಕ್ಷಣ ದೊರೆತರೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾರಥಿ ಸತ್ಯ ಪ್ರಕಾಶ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ನೆರವು ದೊರಕಿಸಲು, ನಾಲ್ಕು ಉಚಿತ ಆಂಬ್ಯುಲೆನ್ಸ್ ಸೇವೆ ಒಗಿಸಲು ಮುಂದಾಗಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಇಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಹೆಚ್ ಡಿ ಕುಮಾರಸ್ವಾಮಿ, ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಇದೆ. ಕೆಲದಿನಗಳ ಹಿಂದೆ ಆರಗ ಜ್ಞಾನೇಂದ್ರ ಅವರೂ ಗುಜರಾತ್ಗೆ ಹೋಗಿದ್ದರು. ಸರ್ಕಾರ ಸ್ಯಾಂಟ್ರೋರವಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಆರೋಪಿಸಿದ್ದರು. ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸ್ಯಾಂಟ್ರೋ ರವಿಗೆ ಸರ್ಕಾರದಿಂದ ಯಾವುದೇ ವಿಶೇಷ ಆತಿಥ್ಯ ಕೊಟ್ಟಿಲ್ಲ. ಅವನೊಬ್ಬ ಕ್ರಿಮಿನಲ್, ಸೆರೆ ಸಿಕ್ಕಿದ್ದಾನೆ, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಮದ್ಯ ಖರೀದಿ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲು ಸರ್ಕಾರ ಅಬಕಾರಿ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ಸಹ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಿನ್ನೆ ಮತ್ತು ಇವತ್ತು ರಜೆ ಇರುವುದರಿಂದ ಸೋಮವಾರ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.