ಬೆಂಗಳೂರು: ಲೋಕಸಭೆ ಸೋಲಿನ ಪರಾಮರ್ಶೆ ಹಾಗು ಪಕ್ಷ ಸಂಘಟನೆ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಪಕ್ಷದ ಹಿರಿಯ ಮುಖಂಡರು ಹಾಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ವಿಶೇಷ ಸಭೆ ನಡೆಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಸಭೆಯಲ್ಲಿ ರಿಜ್ವಾನ್ ಅರ್ಷಾದ್, ವೀರಪ್ಪ ಮೊಯ್ಲಿ, ಚಂದ್ರಪ್ಪ, ವಿ.ಎಸ್.ಉಗ್ರಪ್ಪ, ವಿನಯ್ ಕುಲಕರ್ಣಿ, ಮಿಥುನ್ ರೈ, ರಾಜಶೇಖರ್ ಹಿಟ್ನಾಳ್, ಕೆ.ಎಚ್ .ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದಾರೆ.
ಈ ಸಭೆಗೆ ಹಲವು ಕಾಂಗ್ರೆಸ್ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬೆಂ.ಉತ್ತರ ಅಭ್ಯರ್ಥಿ, ಸಚಿವ ಕೃಷ್ಣಬೈರೇಗೌಡ, ಬೆಂ.ದಕ್ಷಿಣ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್, ಚಾಮರಾಜನಗರ ಅಭ್ಯರ್ಥಿ ಆರ್.ಧ್ರುವನಾರಾಯಣ್, ಮೈಸೂರು ಅಭ್ಯರ್ಥಿ ಸಿ .ಎಚ್. ವಿಜಯಶಂಕರ್ ಗೈರಾದವರಾಗಿದ್ದಾರೆ.
ಬಾಗಲಕೋಟೆ ಅಭ್ಯರ್ಥಿ ವೀಣಾ ಕಾಶಪ್ಪನವರ್ ಬದಲು ವಿಜಯಾನಂದ್ ಕಾಶಪ್ಪನವರ್ ಸಭೆಗೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಸಭೆಗೂ ಮುನ್ನ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪಕ್ಷ ಸಂಘಟನೆ, ಲೋಕಸಭೆ ಸೋಲಿಗೆ ಕಾರಣಗಳ ಬಗ್ಗೆ ಚರ್ಚೆ ಮಾಡಲಾಗುತ್ತೆ. ಜೊತೆಗೆ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮೈತ್ರಿಯೇ ಕಾರಣ ಎಂಬ ಮುನಿಯಪ್ಪ ಹಾಗೂ ಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿಯಪ್ಪ ಹಾಗೂ ಮೊಯ್ಲಿಯವರು ಅವರ ದೃಷ್ಟಿಕೋನದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಸೋಲಿಗೆ ಮೈತ್ರಿ ಕಾರಣವಲ್ಲ. ಬಿಜೆಪಿಯವರ ಅಪಪ್ರಚಾರ ಹಾಗೂ ಹುಸಿ ರಾಷ್ಟ್ರೀಯತೆಯೇ ಕಾರಣ ಎಂದು ಹರಿಹಾಯ್ದರು.
ಸಿಎಂ ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್‌ಗೆ ಸೇರುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್ ಸಹ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ. ಸಾಲಮನ್ನಾ, ಗ್ರಾಮವಾಸ್ತವ್ಯ ಸೇರಿ ನಾನಾ ಯೋಜನೆಗಳ ಯಶಸ್ಸು ಎರಡೂ ಪಕ್ಷಗಳಿಗೂ ಸರಿಸಮನಾಗಿ ಸಿಗುತ್ತೆ ಎಂದರು.