ಬೆಂಗಳೂರು:ಕಾಂತರಾಜ್ ಜಾತಿಗಣತಿ ಸಮೀಕ್ಷಾ ವರದಿ ಸ್ವೀಕರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಎಸ್ಸಿ,ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯದ ಸಂಘಟನೆಗಳು ರಾಜ್ಯ ಮುಖಂಡರ ಸಭೆಯಲ್ಲಿ ಇಂದು ಒಕ್ಕೊರಲಿನ ನಿರ್ಣಯ ಕೈಗೊಂಡಿವೆ.
ಶಾಸಕರ ಭವನದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ರಾಮಚಂದ್ರಪ್ಪ ನೇತೃತ್ವದಲ್ಲಿ ಜಂಟಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯದ ಸಂಘಟನೆಗಳ ರಾಜ್ಯ ಮುಖಂಡರು ಕಾಂತರಾಜ್ ಜಾತಿಗಣತಿ ವರದಿ ಸ್ವೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಡಿ.30ರಂದು ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಲು ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯದ ಸಂಘಟನೆ ಮುಖಂಡರು ನಿರ್ಧರಿಸಿದ್ದಾರೆ.
ಸಂವಿಧಾನದ ಸವಲತ್ತು :ಸಭೆಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ರಾಮಚಂದ್ರಪ್ಪ ಮಾತನಾಡಿ, ಪ್ರಬಲ ಜಾತಿಗಳು ನೂರಾರು ವರ್ಷದಿಂದ ತಮ್ಮ ಮೇಲೆ ಸವಾರಿ ಮಾಡುತ್ತ ಬಂದಿವೆ. ಸಂವಿಧಾನದ ಸವಲತ್ತುಗಳನ್ನು ಕೊಡಲು ಈಗಲೂ ಅಧಿಕಾರದಲ್ಲಿರುವವರಿಗೂ ಸಾಧ್ಯವಾಗುತ್ತಿಲ್ಲ. ಪ್ರಬಲ ಸಮುದಾಯದವರಿಗೆ ನಾವು ಸರಿಸಮಾನವಾಗಿ ಬಂದರೆ, ನಮ್ಮ ಸೇವೆ ಮಾಡಲು ಯಾರು ಇರಲ್ಲ ಎಂಬ ಆತಂಕ ಎದುರಾಗಿದೆ ಎಂದರು.
ಕಾಂತರಾಜ ವರದಿ ಎಲ್ಲಿ ಸೋರಿಕೆಯಾಗಿದೆ ?: ಮಾಜಿ ಸಿಎಂ ಮೂಲ ಪ್ರತಿ ಕಳೆದು ಹೋಗಿದೆ ಅಂತಿದ್ದಾರೆ. ಕಳವು ಆಗಿದ್ದರೆ ಅವರ ಅವಧಿಯಲ್ಲೇ ಕಳವು ಆಗಿರಬೇಕು. ಮಾಜಿ ಸಿಎಂ ವಿರುದ್ಧ ಇತ್ತೀಚೆಗೆ ವಿದ್ಯುತ್ ಕಳವು ಆರೋಪ ಬಂದಿತ್ತು. ಹಾಗಾಗಿ ಅವರೇ ಜಾತಿ ಗಣತಿ ವರದಿಯ ಮೂಲ ಪ್ರತಿಯನ್ನು ಕಳವು ಮಾಡಿರಬೇಕು ಎಂದು ಟಾಂಗ್ ನೀಡಿದರು.
ಡಿಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕು:ಡಿಸಿಎಂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ರಾಜ್ಯದ ಉಪಮುಖ್ಯಮಂತ್ರಿನಾ?. ಒಂದು ಜನಾಂಗದ ಉಪಮುಖ್ಯಮಂತ್ರಿನಾ?. ಒಬ್ಬ ಸಚಿವರೂ ಕೂಡ ವರದಿ ವಿರೋಧಿಸಿ ಸಹಿ ಹಾಕಿದ್ದಾರೆ. ಸಂವಿಧಾನ ಇಟ್ಕೊಂಡು ಪ್ರಮಾಣ ಮಾಡಿರ್ತಾರೆ. ಸ್ವಜನ ಪಕ್ಷಪಾತ ಮಾಡಲ್ಲ ಜಾತಿ ಮಾಡಲ್ಲ ಅಂತ. ಯಾವ ನೈತಿಕತೆ ಇಟ್ಟುಕೊಂಡು ಡಿಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಅವರು ರಾಜೀನಾಮೆ ನೀಡಬೇಕು.ಅದಕ್ಕೆ ನಾವು ಡಿಮ್ಯಾಂಡ್ ಮಾಡಬೇಕು ಎಂದು ಆಗ್ರಹಿಸಿದರು.