ಬೆಂಗಳೂರು:ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮೂವರು ಅನರ್ಹ ಶಾಸಕರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಅಡಗೂರು ಹೆಚ್.ವಿಶ್ವನಾಥ್ - ಹುಣಸೂರು ವಿಧಾನಸಭಾ ಕ್ಷೇತ್ರ, ಕೆ.ಗೋಪಾಲಯ್ಯ - ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ, ಕೆ.ಸಿ.ನಾರಾಯಣಗೌಡ-ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ. ಈ ಮೂವರು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಅವರನ್ನು ಪಕ್ಷದಿಂದ ಉಚ್ಛಾಟಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ಹೊರಡಿಸಿರುವ ಆದೇಶದ ಪ್ರತಿ ಕೆಲ ದಿನಗಳ ಹಿಂದೆ ಈ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ನಲ್ಲಿ ತಂಗಿದ್ದರು. ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲೂ ಅವರು ಸದನಕ್ಕೆ ಗೈರಾಗಿದ್ದರು. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದಿನ ಸಿಎಂ ಕುಮಾರಸ್ವಾಮಿ ಅವರು ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಸ್ಪೀಕರ್, ಜೆಡಿಎಸ್ನ ಮೂವರು ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದರು. ಇದೀಗ ಜೆಡಿಎಸ್ನ ಈ ಮೂವರು ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ನಿನ್ನೆಯಷ್ಟೆ ಕಾಂಗ್ರೆಸ್ನ 14 ಮಂದಿ ಅನರ್ಹ ಶಾಸಕರನ್ನು ಎಐಸಿಸಿ ಉಚ್ಛಾಟಿಸಿರುವುದನ್ನು ಸ್ಮರಿಸಬಹುದು.