ಬೆಂಗಳೂರು :ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ರಾಜ್ಯ ರಾಜಕಾರಣದಲ್ಲಿ ಹಲವಾರು ಘಟನಾವಳಿಗಳು ನಡೆದವು. ಅಲ್ಲಿಂದೀಚೆಗೆ ಜೆಡಿಎಸ್ನಲ್ಲಿ ಒಂದಲ್ಲಾ ಒಂದು ರೀತಿಯ ಗೊಂದಲಗಳು, ಅಪಸ್ವರಗಳು ಕೇಳಿಬರುತ್ತಲೇ ಇವೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸಂದರ್ಭದಲ್ಲಿ ಜೆಡಿಎಸ್ ನಾಯಕರು ಆಡಳಿತ ಪಕ್ಷದ ಪರವಾಗಿ ನಿಂತಿದ್ದು, ಇದೀಗ ಸಭಾಪತಿ ಸ್ಥಾನ ಪಡೆದುಕೊಳ್ಳುವ ಮೂಲಕ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ. ಆದರೆ, ಮೈತ್ರಿ ವಿಚಾರ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ್ದು ಮುಖಂಡರ ನಿಲುವಿಗೆ ಅಪಸ್ವರ ಎದ್ದಿದೆ ಎಂದು ಹೇಳಲಾಗುತ್ತಿದೆ.
ಕೆಲ ತಿಂಗಳ ಹಿಂದೆ ಇದೇ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿದ್ದ ಗುಬ್ಬಿ ಶಾಸಕ ಎಸ್.ಆರ್ . ಶ್ರಿನಿವಾಸ್, ನಾಯಕರು ಒಳಗೊಂದು, ಹೊರಗೊಂದು ಮಾತನಾಡಬಾರದು ಎಂದು ಹೇಳಿದ್ದರು. ಕಳೆದ ಚುನಾವಣೆಯ ವೇಳೆ ಬಿಜೆಪಿ ಜೊತೆಗೆ ಜೆಡಿಎಸ್ ಒಳ ಒಪ್ಪಂದ ಸತ್ಯ. ಈ ಬಗ್ಗೆ ನಾನು ಆಡಿದ ಮಾತಿಗೆ ಬದ್ಧ ಎಂದಿದ್ದರು. ಅಲ್ಲದೆ, ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ ಎಂದು ನಮ್ಮ ನಾಯಕರೇ ಹೇಳಿದ್ದರು. ಸರ್ಕಾರ ಬೀಳುವುದಿಲ್ಲ, ಮಧ್ಯಂತರ ಚುನಾವಣೆ ಬರುವುದಿಲ್ಲ. ಆದರೆ, ಬಿಜೆಪಿಗೆ ನನ್ನ ಬೆಂಬಲವಿಲ್ಲ ಎಂದಿದ್ದರು. ಅವರಲ್ಲದೇ ಆಂತರಿಕವಾಗಿ ಕೆಲವು ಮುಖಂಡರು ನಾಯಕರ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ರೈತರ ಪಕ್ಷ ಎಂದು ಕರೆಯಲ್ಪಡುವ ಜೆಡಿಎಸ್ ಭೂ ಸುಧಾರಣಾ ಕಾಯ್ದೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಪರವಾಗಿ ನಿಂತಿದೆ. ಗೋಹತ್ಯೆ ವಿಚಾರದಲ್ಲೂ ಗೊಂದಲದ ನಡೆಯನ್ನು ಅನುಸರಿಸಿದೆ. ಮತ್ತೊಂದು ಕಡೆಯಲ್ಲಿ ವಿಧಾನಪರಿಷತ್ ಸಭಾಪತಿ ಬದಲಾವಣೆಯ ಸಂದರ್ಭದಲ್ಲಿ ಬಹಿರಂಗವಾಗಿ ಬಿಜೆಪಿ ಪರವಾಗಿ ನಿಂತಿದೆ. ಒಂದು ಕಡೆಯಲ್ಲಿ ಸರ್ಕಾರದ ಕೆಲವು ನೀತಿಗಳನ್ನು ವಿರೋಧ ಮಾಡುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ. ಆದರೆ ಇದು ಪಕ್ಷದ ಕೆಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ.ಇನ್ನು ಜೆಡಿಎಸ್ ಎನ್‌ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ. ಇದೆಲ್ಲವೂ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹಿಂದೆ ಸರಣಿ ಟ್ವೀಟ್ ಮಾಡಿ, ಪ್ರಧಾನಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧವ್ಯವೂ ನನಗಿದೆ. ಯಡಿಯೂರಪ್ಪ ಹಿರಿಯರು ಎಂಬ ಗೌರವವೂ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ. ಜೆಡಿಎಸ್ ವಿಚಾರದಲ್ಲಿ ಬಿಜೆಪಿಯು ಎಚ್ಚರವಾಗಿರಲಿ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದರು.