ಕರ್ನಾಟಕ

karnataka

By

Published : Apr 7, 2023, 12:00 PM IST

ETV Bharat / state

9 ವರ್ಷ ಕಳದರೂ ಪೂರ್ಣಗೊಳ್ಳದ ಜಕ್ಕೂರು ಮೇಲ್ಸೇತುವೆ ಕಾಮಗಾರಿ

ಜಕ್ಕೂರು ಯಲಹಂಕ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ 9 ವರ್ಷಗಳಾದರು ಇನ್ನೂ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಜಕ್ಕೂರು ಮೇಲ್ಸೇತುವೆ ಕಾಮಗಾರಿ
ಜಕ್ಕೂರು ಮೇಲ್ಸೇತುವೆ ಕಾಮಗಾರಿ

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಜಕ್ಕೂರು ಮತ್ತು ಯಲಹಂಕಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿ ಮತ್ತು ರೈಲ್ವೆ ಇಲಾಖೆಯ ಸಹಯೋಗದಲ್ಲಿ ಪ್ರಾರಂಭಿಸಿ 9 ವರ್ಷ ಕಳೆದರೂ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸ್ಥಳಿಯ ಶಾಸಕರ ನಿರ್ಲಕ್ಷತನದಿಂದಲೇ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಜಕ್ಕೂರು ಮತ್ತು ಯಲಹಂಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈಲ್ವೆ ಹಳಿಯು ಹಾದು ಹೋಗಿದ್ದು, ಇದಕ್ಕೂ ಮೊದಲು ರೈಲು ಬಂದಾಗ ರಸ್ತೆಗೆ ತಡೆ ಹಾಕಲಾಗುತ್ತಿತ್ತು. ಈ ರೈಲ್ವೆ ಕ್ರಾಸಿಂಗ್ ಗೇಟ್ ಅನ್ನು ತಪ್ಪಿಸುವ ಸಲುವಾಗಿ ಮೇಲ್ಸೇತುವೆ ಕಾಮಗಾರಿಯನ್ನು ನಿರ್ಮಾಣ ಮಾಡುವ ಕಾಮಗಾರಿಯನ್ನು 2014ರ ಬಜೆಟ್‌ನಲ್ಲಿ ಕೈಗೆತ್ತಿಕೊಂಡಿತು. ಆದರೆ, ಅವೈಜ್ಞಾನಿಕ ನಿರ್ಧಾರಗಳಿಂದ ಮೇಲ್ಸೇತುವೆ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರು ಲೇನ್​ಗೆ ಬದಲಾದ ಕಾಮಗಾರಿ:ಮೊದಲು ನಾಲ್ಕು ಲೇನ್‌ಗಳಲ್ಲಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದ ಕಾರಣ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಆದರೆ ಯಲಹಂಕ ಹಾಗೂ ಜಕ್ಕೂರು ಸುತ್ತಮುತ್ತಲು ಅಭಿವೃದ್ಧಿಯಾಗುತ್ತಿರುವ ಕಾರಣ ಆರು ಲೇನ್‌ಗಳ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಮುಂದಾದರು. ಈ ಹೆಚ್ಚುವರಿ ಕಾಮಗಾರಿಗೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆಯನ್ನು ನಡೆಸದ ಕಾರಣ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ಭೂಸ್ವಾದೀನ ಪ್ರಕ್ರಿಯೆಯಲ್ಲಿ ಸಮಸ್ಯೆ:ಮೇಲ್ಸೇತುವೆಯನ್ನು ನಾಲ್ಕು ಲೇನ್‌ಗಳಿಂದ ಆರು ಲೇನ್‌ಗಳಿಗೆ ವಿಸ್ತರಣೆ ಮಾಡಿದ ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಭೂಸ್ವಾದೀನ ಮಾಡಿಕೊಳ್ಳಬೇಕಾಗಿತ್ತು. ಹಾಗೆ ಮಾಡದೇ ನೇರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗಾಗಿ ಭೂಮಿಯನ್ನು ಕಳೆದುಕೊಳ್ಳುವವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶಾಸಕರು ಭೂಮಿಯನ್ನು ಕಳೆದುಕೊಳ್ಳುತ್ತಿರುವವರಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಅಧಿಕಾರಿಗಳೊಂದಿಗೆ ಸೂಕ್ತ ಮಾತುಕತೆ ನಡೆಸಿ, ಕ್ರಮ ತೆಗೆದುಕೊಂಡಿದ್ದರೆ, ಇಷ್ಟೊತ್ತಿಗೆ ಕಾಮಗಾರಿ ಪೂರ್ಣವಾಗುತ್ತಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಪೂರ್ಣಗೊಂಡರೆ ನಗರದ ನಿವಾಸಿಗಳಿಗೆ ಅನುಕೂಲ:ಮೇಲ್ಸೇತುವೆಯನ್ನು ನಿರ್ಮಾಣ ಮಾಡಿದರೆ, ಜಕ್ಕೂರಿನ ನಿವಾಸಿಗಳಿಗೆ ಮಾತ್ರವಲ್ಲ ಬಹುತೇಕ ನಗರದ ನಿವಾಸಿಗಳಿಗೆಲ್ಲವೂ ಉಪಯೋಗವಾಗಲಿದೆ. ಈಗ ಜಕ್ಕೂರಿನ ನಿವಾಸಿಗಳು ಯಲಹಂಕಕ್ಕೆ ಹೋಗಬೇಕಾದರೆ ಜಿಕೆವಿಕೆ ಬಸ್‌ಸ್ಟಾಪ್ ಮೂಲಕವೇ ಹೋಗುತ್ತಿದ್ದಾರೆ. ಇದು ಸುಮಾರು ನಾಲ್ಕು ಕಿ.ಮೀ. ದೂರವಾಗುತ್ತದೆ. ಆದರೆ, ಮೇಲ್ಸೇತುವೆ ನಿರ್ಮಾಣವಾದರೆ, 1 ಕಿ.ಮೀ. ನಲ್ಲಿ ಯಲಹಂಕವನ್ನು ತಲುಪಬಹುದು. ಹಾಗೆಯೇ ಅಲ್ಲಿಂದ ನಾಗವಾರಕ್ಕೆ ಹೆಬ್ಬಾಳವನ್ನು ಪ್ರವೇಶಿಸದೇ ನೇರವಾಗಿ ಮೇಲ್ಸೇತುವೆಯ ಮೂಲಕ ಹೋಗಬಹುದು. ಇದರಿಂದ ಹೆಬ್ಬಾಳ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು ಎಂದು ಸ್ಥಳೀಯರು ವಿವರಿಸಿದ್ದಾರೆ.

ಸುರಂಗ ಮಾರ್ಗದಲ್ಲಿ ನೀರು:ಯೋಜನೆಯಲ್ಲಿ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವಂತೆ ಸುರಂಗ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ಸೇರಿಸಲಾಯಿತು. ಎರಡು ತಿಂಗಳ ಹಿಂದೆ ಸಾರ್ವಜನಿಕರ ಒತ್ತಾಯದ ಮೇರೆಗೆ ಸುರಂಗ ಮಾರ್ಗವನ್ನು ನಿರ್ಮಿಸಿದ್ದಾರೆ. ಆದರೆ ಮಳೆ ಬಿದ್ದರೆ ಮಾರ್ಗದಲ್ಲಿ ನೀರು ತುಂಬಿಕೊಳ್ಳುತ್ತಿದೆ ಎಂಬುದು ಸ್ಥಳೀಯರ ಮಾತಾಗಿದೆ.

ಕಾಮಗಾರಿ ಸ್ಥಳದಲ್ಲಿ ಕಸ:ನಿಂತು ಹೋದ ಕಾಮಗಾರಿ ಸ್ಥಳದಲ್ಲಿ ಕಸವನ್ನು ಸುರಿಯಲಾಗುತ್ತಿದೆ. ಕಾಮಗಾರಿಯು ಅರ್ಧಕ್ಕೆ ಸ್ಥಗಿತವಾದ ಕಾರಣ, ಈಗ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಕಾಮಗಾರಿಯನ್ನು ಚುನಾವಣೆ ನಡೆಯುವವರೆಗೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ದುರಸ್ತಿ: ಪರ್ಯಾಯ ಮಾರ್ಗ ಅಧಿಸೂಚನೆ ಮುಂದುವರಿಕೆ

ABOUT THE AUTHOR

...view details