ಬೆಂಗಳೂರು:ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಉಪ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮತ್ತೆ ಕೋರ್ ಕಮಿಟಿ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ನಿಗದಿಯಾಗದ ಕಾರಣ ಬಹಳ ಚರ್ಚೆ ಆಗಿಲ್ಲ. ಆರ್. ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರ, ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಕುರಿತು ಮಾತ್ರ ಚರ್ಚೆ ಆಗಿದೆ. ಅಭ್ಯರ್ಥಿಗಳ ಹೆಸರು ಕುರಿತು ಸುದೀರ್ಘ ಚರ್ಚೆ ನಡೆಸಿ ಹೈಕಮಾಂಡ್ಗೆ ಹೆಸರುಗಳನ್ನು ಕಳಿಸಿಕೊಡಲು ನಿರ್ಧರಿಸಲಾಯಿತು. ಕ್ಷೇತ್ರಗಳಿಗೆ ಉಸ್ತುವಾರಿಗಳನ್ನೂ ನೇಮಕ ಮಾಡಲಾಯಿತು. ಬೆಳಗಾವಿ, ಮಸ್ಕಿ, ಬಸವ ಕಲ್ಯಾಣ ಕ್ಷೇತ್ರಗಳ ಚುನಾವಣಾ ದಿನಾಂಕ ಪ್ರಕಟವಾದ ನಂತರ ಮತ್ತೊಮ್ಮೆ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹಿಂದೆ ನಡೆದ 15 ಕ್ಷೇತ್ರಗಳ ಉಪ ಚುನಾವಣೆ ವೇಳೆ ಒಂದೊಂದೇ ಹೆಸರು ಕಳಿಸಲಾಗಿತ್ತು. ಆದರೆ ಈ ಬಾರಿ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ರಾಜ್ಯಸಭೆ ಹಾಗೂ ಇತರ ಸಂದರ್ಭದಲ್ಲಿ ಕೂಡ ಯಾವ ಹೆಸರುಗಳು ಪ್ರಸ್ತಾಪಗೊಂಡಿದ್ದವೂ ಎಲ್ಲವನ್ನೂ ಹೈಕಮಾಂಡ್ಗೆ ಕಳಿಸಿಕೊಡಲಾಗಿತ್ತು. ಈಗಲೂ ಅದೇ ರೀತಿ ಮಾಡಲಾಗಿದೆ. ಇದರಲ್ಲಿ ಬಹಳ ಗೊಂದಲವೇನಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಚರ್ಚಿಸಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ತೆರಳುವುದಾಗಿ ಸಿಎಂ ಈಗಾಗಲೇ ಹೇಳಿಕೆ ನೀಡಿದ್ದಾರೆ. ಉಪ ಚುನಾವಣೆ ಹಾಗೂ ಬಿಹಾರ ಚುನಾವಣೆ ಘೋಷಣೆಯಾಗಿರುವ ಕಾರಣ ವರಿಷ್ಠರು ಅತ್ತ ಚಿತ್ತ ಹರಿಸಿದ್ದಾರೆ. ಸದ್ಯದಲ್ಲೇ ಸಿಎಂಗೆ ಸಮಯಾವಕಾಶ ಕೊಡಲಿದ್ದು, ಅನುಮತಿ ಸಿಗುತ್ತಿದ್ದಂತೆ ಸಿಎಂ ದೆಹಲಿಗೆ ತೆರಳಿ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಬರಲಿದ್ದಾರೆ ಎಂದರು.
ಸದ್ಯಕ್ಕೆ ವಾತಾವರಣ ಸರಿಯಿಲ್ಲ. ಶಾಲೆಗಳ ಆರಂಭಕ್ಕೆ ಪೂರಕ ಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಅಲ್ಲದೆ ಕೊರೊನಾ ಹೆಚ್ಚಳವಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದು ಬೇಡ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಬೇಕಿದ್ದರೆ ಕೆಲ ಶಾಲೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಿ ನೋಡಿ. ನಾವು ನಮ್ಮ ಅಭಿಪ್ರಾಯ ಹೇಳಿದರೂ ಪಾಲಕರ ಅಭಿಪ್ರಾಯ ಮುಖ್ಯವಾಗಲಿದೆ. ಹಾಗಾಗಿ ಪಾಲಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬೇಕು. ಮಕ್ಕಳ ಹಿತದೃಷ್ಟಿಯಿಂದ ಈಗಲೇ ಶಾಲೆ ಆರಂಭ ಬೇಡ ಎನ್ನುವುದು ನನ್ನ ನಿಲುವಾಗಿದೆ ಎಂದು ತಿಳಿಸಿದರು.