ಕರ್ನಾಟಕ

karnataka

ETV Bharat / state

ದಿ ಕಾಶ್ಮೀರ್​ ಫೈಲ್ಸ್ ಸಿನೆಮಾಗೆ ಸಬ್ಸಿಡಿ ಕೊಟ್ಟ ಸರ್ಕಾರ ಕನ್ನಡದ 'ಜೇಮ್ಸ್' ಚಿತ್ರಕ್ಕೆ ಕೊಡುವುದೇ? - ಜೇಮ್ಸ್ ಚಿತ್ರಕ್ಕೂ ಸಬ್ಸಿಡಿಗೆ ಒತ್ತಾಯ

ದೇಶದಲ್ಲೇ ಅಲ್ಲ ರಾಜ್ಯದಲ್ಲೂ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾದ್ದೇ ಮಾತು. ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಸರ್ಕಾರ ಈ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.

ಜೇಮ್ಸ್
ಜೇಮ್ಸ್

By

Published : Mar 19, 2022, 7:28 PM IST

ಬೆಂಗಳೂರು : ದೇಶಾದ್ಯಂತ ಸಂಚಲನ ಮೂಡಿಸಿರುವ "ದಿ ಕಾಶ್ಮೀರ್​ ಫೈಲ್ಸ್" ಸಿನಿಮಾ ಕೆಲವು ಐತಿಹಾಸಿಕ ಕಹಿ ಸತ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದರ ಜೊತೆಗೆ ಕೆಲವು ಪರ-ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿದೆ.

1990 ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ ಕುರಿತಾಗಿ ಹೆಣೆದಿರುವ ಈ ಕಥೆಯಲ್ಲಿ ಎಳೆ ಎಳೆಯಾಗಿ, ಮುಚ್ಚಿಟ್ಟ ಇತಿಹಾಸವನ್ನು ಕೆದಕಲು ಪ್ರಯತ್ನಿಸಲಾಗಿದೆ ಎಂಬ ಅಭಿಪ್ರಾಯವೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸತ್ಯವನ್ನು ಗಟ್ಟಿದನಿಯಲ್ಲಿ ಹೇಳಿರುವ ದಿ ಕಾಶ್ಮೀರ್ ಫೈಲ್ಸ್ ನಂತಹ ಅನೇಕ ಚಿತ್ರಗಳು ಬರಬೇಕಿದೆ ಎಂದಿದ್ದಾರೆ.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು, ಕಾಶ್ಮೀರಿ ಪಂಡಿತ ಸಮುದಾಯವನ್ನು ಯೋಜಿತವಾಗಿ 1990 ರಲ್ಲಿ ಹತ್ಯೆ ನಡೆಸಿದ್ದರು. ಇದೇ ಚಿತ್ರದ ಕಥಾವಸ್ತುವಾಗಿದೆ. ಕಾಶ್ಮೀರ್​ ಪಂಡಿತರ ಮಾರಣ ಹೋಮಕ್ಕೆ ಯಾರು ಕಾರಣ ಎಂಬ ವಿಚಾರ ಈಗ ರಾಜಕೀಯ ಪಕ್ಷಗಳಲ್ಲೂ ಪರಸ್ಪರ ಆರೋಪ-ಪ್ರತ್ಯಾರೋಪ ಸದ್ದು ಮಾಡುತ್ತಿವೆ.

ರಾಜ್ಯದಲ್ಲಿ ತೆರಿಗೆ ವಿನಾಯಿತಿ :ದೇಶದಲ್ಲೇ ಅಲ್ಲ, ರಾಜ್ಯದಲ್ಲೂ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾದ್ದೇ ಮಾತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಸರ್ಕಾರ ಈ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.

ಪಕ್ಷದ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಓರಿಯಾನ್ ಮಾಲ್ ನಲ್ಲಿ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಬಂದ ಬಳಿಕ ಸಿಎಂ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ.

ಪಕ್ಷದ ಸೂಚನೆ ಮೇರೆಗೆ ಸರ್ಕಾರದ ಸಚಿವರು, ಬಿಜೆಪಿ ಶಾಸಕರು ಸಿನಿಮಾ ವೀಕ್ಷಿಸಿದ್ದರು. ಇದರ ವ್ಯವಸ್ಥೆಯನ್ನು ಮೊನ್ನೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ್ದರು. ಆದರೆ, ಕಾಂಗ್ರೆಸ್ ಶಾಸಕರು ಯಾರೂ ಸಹ ಹೋಗಿರಲಿಲ್ಲ. ಬಿಜೆಪಿಯ ಕೆಲ ಶಾಸಕರೇ ಸಿನಿಮಾ ನೋಡಲು ಹೋಗಿರಲಿಲ್ಲ. ಕರ್ನಾಟಕ ವಿಧಾನಪರಿಷತ್ ಆಯೋಜಿಸಿದ್ದ ಸಿನಿಮಾ ಪ್ರದರ್ಶನದಲ್ಲಿ ಅನೇಕ ಬಿಜೆಪಿ ಮುಖಂಡರು ಸಿನಿಮಾ ನೋಡಿದರು. ಚಿತ್ರ ಪ್ರದರ್ಶನದ ವಿರುದ್ಧ ಪರಿಷತ್ತಿನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿರೋಧ ವ್ಯಕ್ತಪಡಿಸಿದ್ದನ್ನು ಮರೆಯುವಂತಿಲ್ಲ.

ಮುಖ್ಯಮಂತ್ರಿ ಬೊಮ್ಮಾಯಿ ಚಿತ್ರಕ್ಕೆ ಸಬ್ಸಿಡಿ ಘೋಷಣೆ ಮಾಡುವ ಮೂಲಕ ಪ್ರತ್ಯಕ್ಷವಾಗಿ ಬೆಂಬಲವಾಗಿ ನಿಂತಿರುವುದು ಗೊತ್ತಿರುವ ಸಂಗತಿ. ‌ಸಚಿವ ಆರ್. ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ ರೇಣುಕಾಚಾರ್ಯ ಮತ್ತಿತರ ಮುಖಂಡರು, ಚಿತ್ರದ ಮೂಲಕ ಪರೋಕ್ಷವಾಗಿ ಎಲ್ಲ ಅನಾಹುತಗಳಿಗೆ ಕಾಂಗ್ರೆಸ್ ಕಾರಣ ಎಂದು ಟಾಂಗ್ ನೀಡುತ್ತಿದ್ದಾರೆ.

ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಡೀ ಊರಿಗೆ ಉಚಿತವಾಗಿ ಕಾಶ್ಮೀರ್​ ಫೈಲ್ಸ್ ಚಿತ್ರವನ್ನು ತೋರಿಸಲು ಹೊರಟಿದ್ದಾರೆ. ಗುಜರಾತ್, ಮಧ್ಯ ಪ್ರದೇಶ, ಹರಿಯಾಣ, ಗೋವಾ, ತ್ರಿಪುರ ಸೇರಿದಂತೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲೂ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿ ಬೆಂಬಲವಾಗಿ ನಿಂತಿವೆ. ಇತಿಹಾಸದಲ್ಲಿ ಒಂದು ಚಿತ್ರಕ್ಕೆ ಸರ್ಕಾರಗಳು ಈ ಮಟ್ಟಿಗೆ ಸಹಾಯ ಹಸ್ತವನ್ನು ನೀಡಿರುವುದು ಇದೇ ಮೊದಲು. ಈ ಚಿತ್ರ ಈಗ ದೇಶದ ವಿವಿಧ ಭಾಷೆಗಳಿಗೆ ರಿಮೇಕ್ ಆಗುತ್ತಿದೆ.

ಜೇಮ್ಸ್ ಚಿತ್ರಕ್ಕೂ ಸಬ್ಸಿಡಿಗೆ ಒತ್ತಾಯ :ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಕೊನೆಯ ಚಲನಚಿತ್ರ "ಜೇಮ್ಸ್" ತೆರೆಕಂಡಿದ್ದು, ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡಬೇಕೆಂಬ ಒತ್ತಾಯಗಳು ಇದೀಗ ಅಭಿಮಾನಿಗಳು ಹಾಗೂ ರಾಜಕಾರಣಿಗಳಿಂದ ಕೇಳಿಬರುತ್ತಿವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು, ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಮಾತ್ರ ದಿ ಕಾಶ್ಮೀರ್​ ಫೈಲ್ಸ್ ಚಿತ್ರಕ್ಕೆ ಶರವೇಗದಲ್ಲಿ ತೆರಿಗೆ ವಿನಾಯಿತಿ ನೀಡಿತು. ಆದರೆ ಕನ್ನಡದ ಜೇಮ್ಸ್ ಚಿತ್ರಕ್ಕೆ ಸಬ್ಸಿಡಿ ಕೊಡುವ ಬಗ್ಗೆ ಇನ್ನೂ ಮೀನಾಮೇಷ ಎಣಿಸುತ್ತಿರುವುದಕ್ಕೆ ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.

ಪುನೀತ್ ರಾಜ್‍ಕುಮಾರ್ ಹುಟ್ಟಿದ ಹಬ್ಬದ ದಿನದೊಂದು ತೆರಿಗೆ ವಿನಾಯಿತಿ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಪುನೀತ್ ಅಭಿಮಾನಿಗಳು ನನಗೆ ಕರೆ ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆಗಳು ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details