ಬೆಂಗಳೂರು: ಹೊಟ್ಟೆಪಾಡಿಗಾಗಿ ಬೇಡುತ್ತಿದ್ದ ಭಿಕ್ಷೆ ಇದೀಗ ದಂಧೆಯಾಗಿ ಮಾರ್ಪಟ್ಟಿದೆ. ಜನರ ಅನುಕಂಪವನ್ನೇ ಬಂಡವಾಳ ಮಾಡಿಕೊಂಡು ರಾಜಧಾನಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು ಹಾಗೂ ಮಹಿಳೆಯರು ಸೇರಿ ಒಟ್ಟು 31 ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಮಹಿಳಾ ಹಾಗೂ ಮಕ್ಕಳ ಪಾಲನಾ ಮಂದಿರಕ್ಕೆ ಒಪ್ಪಿಸಿದ್ದಾರೆ.
ಬಸ್ಸು, ರೈಲು ನಿಲ್ದಾಣಗಳು, ಸಿಗ್ನಲ್ ಹಾಗೂ ಧಾರ್ಮಿಕ ಕೇಂದ್ರಗಳ ಮುಂದೆ ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕರ ಮೇಲೆ ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, 10 ಮಂದಿ ಮಹಿಳೆಯರು ಹಾಗೂ 21 ಮಕ್ಕಳು ಸೇರಿ ಒಟ್ಟು 31 ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.
ಜನರ ಅನುಕಂಪವೇ ಇವರಿಗೆ ಬಂಡವಾಳ:ಧಾರ್ಮಿಕ ಕೇಂದ್ರ ಅಥವಾ ರಸ್ತೆಬದಿಗಳಲ್ಲಿ ಮಹಿಳೆಯರು ಭಿಕ್ಷೆ ಬೇಡುವವರಿಗೆ ಹಣದ ಸಹಾಯ ಮಾಡಕೂಡದು ಎಂದು ಹಲವು ಬಾರಿ ಜಾಗೃತಿ ಮೂಡಿಸಿದರೂ ಜನರು ಮಾತ್ರ ಮಾನವೀಯತೆ ಮೆರೆದು ತಮ್ಮ ಕೈಲಾದ ಹಣಕಾಸಿನ ಸಹಾಯ ಮಾಡುತ್ತಿದ್ದಾರೆ. ಇದು ಭಿಕ್ಷಾಟನೆ ದಂಧೆ ಹೆಚ್ಚಳಕ್ಕೆ ಕಾರಣವಾಗಿದೆ. ಜನರ ಅನುಕಂಪ ಗಿಟ್ಟಿಸಿಕೊಂಡು ಯಾರದ್ದೋ ಮಕ್ಕಳನ್ನು ತನ್ನ ಸೆರಗಿಗೆ ಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಂದ ಬೆಂಗಳೂರಿಗೆ ದಾಂಗುಡಿ ಇಟ್ಟು ದಂಧೆಯಲ್ಲಿ ಸಕ್ರಿಯರಾಗಿರುವುದು ಕಂಡುಬಂದಿದೆ.
ವಶಕ್ಕೆ ಪಡೆದುಕೊಂಡ 10 ಮಹಿಳೆಯರ ಪ್ರಾಥಮಿಕ ವಿಚಾರಣೆ ವೇಳೆ ಮಗುವಿನೊಂದಿಗೆ ಭಿಕ್ಷೆ ಬೇಡುವ ಮಹಿಳೆಯರು ನಿಜವಾದ ತಾಯಿಯಲ್ಲ ಎಂಬುದು ಗೊತ್ತಾಗಿದೆ. ಯಾರದ್ದೋ ಮಗುವನ್ನು ಬಾಡಿಗೆ ಅಥವಾ ಕಳ್ಳಸಾಗಣೆ ಮೂಲಕ ಕರೆತಂದು ಅನಿಷ್ಟ ಪದ್ಧತಿಗೆ ನೂಕಿರುವುದು ವಿಚಾರಣೆ ವೇಳೆ ಬಯಲಾಗಿದೆ. ಭಿಕ್ಷಾಟನೆ ವೇಳೆ ಮಗು ಅಳದಿರಲು ಮುಂಜಾನೆ ಆಲ್ಕೋಹಾಲ್ ಕುಡಿಸುತ್ತಿದ್ದರು. ಮದ್ಯ ಕುಡಿಸಿ ಮಗು ದಿನವಿಡೀ ನಿದ್ರಾವಸ್ಥೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.