ಬೆಂಗಳೂರು:ರಾಜ್ಯದಲ್ಲಿ ದಿನದಿಂದ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ರೋಗಿಗಳಿಗೆ ಹಬ್ಬುತ್ತಿರುವ ಮಹಾಮಾರಿ ಕೊರೊನಾ ಮೂರರಿಂದ ನಾಲ್ಕು ತಿಂಗಳೊಳಗೆ ದುರ್ಬಲ ಆಗಲಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ತನ್ನ ತೀವ್ರತೆಯನ್ನುಕಳೆದುಕೊಳ್ಳಲಿದೆ ಎಂದು ರಾಜ್ಯ ಸರ್ಕಾರದ ಕೊರೊನಾ ನಿಯಂತ್ರಣ ಕಾರ್ಯಪಡೆಯ ಹಿರಿಯ ಸದಸ್ಯರಾದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಬುಧವಾರ 'ಈ ಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ, ಸಾಮಾಜಿಕ ಅಂತರ ಕಾಯ್ದುಕೊಂಡರೆ, ಸ್ಯಾನಿಟೈಸರ್ ತಪ್ಪದೇ ಆಗಾಗ ಬಳಸಿದರೆ ಕೊರೊನಾ ಹರಡದಂತೆ ತಡೆಯಬಹುದೆಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ವೈರಸ್ ಈಗ ಸೆಮಿಫೈನಲ್ ಹಂತದಲ್ಲಿದೆ. ಜುಲೈ ನಂತರ ಹರಡುವಿಕೆಯ ಪ್ರಮಾಣ ಕಡಿಮೆಯಾಗಿ ನಿಯಂತ್ರಣಕ್ಕೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನ ಸಾಮಾನ್ಯವಾಗಿ ಯಾವುದೇ ವೈರಾಣುವಿನ ಆಯಸ್ಸು 3ರಿಂದ 4 ತಿಂಗಳು ಇರುತ್ತದೆ. ಈಗಾಗಲೇ ಸಾವಿರಾರು ವರ್ಷಗಳಲ್ಲಿ ನೂರಾರು ವೈರಸ್ಗಳು ಭೂಮಿಗೆ ಬಂದು ನಶಿಸಿಹೋಗಿವೆ. ಕೊರೊನಾ ವೈರಸ್ ಸಹ ಹಾಗೆಯೇ... ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ವೇಳೆಗೆ ಕೊರೊನಾ ವೈರಸ್ ದುರ್ಬಲವಾಗಲಿದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ತನ್ನ ತೀಕ್ಷಣತೆ ಕಳೆದುಕೊಳ್ಳಲಿದೆ ಮತ್ತು ಅದರ ಆಯಸ್ಸು ಸಹ ಅಂತ್ಯಗೊಳ್ಳಲಿದೆ. ಅಲ್ಲೊಂದು ಇಲ್ಲೊಂದು ಪ್ರಕರಣ ಮಾತ್ರ ವರದಿಯಾಗಬಹುದು ಎಂದರು.
ಕೊರೊನಾ ವೈರಸ್ ಸೋಂಕು ಯಾವುದೇ ಚಿಕಿತ್ಸೆ ಇಲ್ಲದೆ ಗುಣವಾಗುವ ರೊಗವಾಗಿದೆ. ಶೇಕಡ 90ರಷ್ಟು ಸೋಂಕು ಪೀಡಿತರು ಚಿಕಿತ್ಸೆ ಇಲ್ಲದೇ ಗುಣಮುಖರಾಗಿದ್ದಾರೆ. ಈ ರೋಗದ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ಸಾಕು ಕೋವಿಡ್-19 ಅನ್ನು ಹತೋಟಿಯಲ್ಲಿಡಬಹುದು ಎಂದು ಡಾ. ಮಂಜುನಾಥ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಯಶಸ್ವಿಯಾಗಿ ಮಾಡಲಾಗಿದೆ. ಕೇರಳ ರಾಜ್ಯದ ನಂತರ ದೇಶದಲ್ಲೇ ಕೊರೊನಾವನ್ನು ಉತ್ತಮಾಗಿ ನಿಯಂತ್ರಿಸಿದ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ನಿಯಂತ್ರಣದ ಜವಾಬ್ದಾರಿ ತಗೆದುಕೊಂಡಿರುವುದು, ಆರೋಗ್ಯ ಇಲಾಖೆ, ಗೃಹ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರ ಪರಿಣಾಮ ರಾಜ್ಯದಲ್ಲಿ ಕೊರೊನಾ ಹರಡುವಿಕೆ ಅತಿ ಹೆಚ್ಚು ನಿಯಂತ್ರಣದಲ್ಲಿದೆ ಎಂದರು.
ನಾಲ್ಕು ಲಕ್ಷಕ್ಕೂ ಅಧಿಕ ಶಂಕಿತ ಜನರ ಕೊರೊನಾ ಪರೀಕ್ಷೆ ನಡೆಸಲಾಗಿದೆ. 70 ಕೊರೊನಾ ಲ್ಯಾಬ್ ಟೆಸ್ಟ್ ಕೇಂದ್ರಗಳು ರಾಜ್ಯದಲ್ಲಿವೆ. ದೇಶದ ಶೇ.10ರಷ್ಟು ಪರೀಕ್ಷಾ ಕೇಂದ್ರಗಳು ನಮ್ಮಲ್ಲಿವೆ. ಇವೆಲ್ಲದರ ಪರಿಣಾಮ ಕೊರೊನಾ ಹರಡುವಿಕೆ ಇಂದು ಹತೋಟಿಯಲ್ಲಿದೆ. ಅನ್ಯ ರಾಜ್ಯಗಳಿಂದ ಬರುವವರು ಮತ್ತು ತಬ್ಲಿಘಿಗಳಿಂದ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾಗಿದೆ. ಅವರೂ ನಮ್ಮವರೇ ಎನ್ನುವ ಭಾವನೆಯಿಂದ ಚಿಕಿತ್ಸೆ ನೀಡಲಾಗಿದೆ ಎಂದರು.
ಲಾಕ್ಡೌನ್ ಸಡಿಲಿಕೆ ಅನಿವಾರ್ಯ. ಬಹಳ ದಿನಗಳ ತನಕ ಲಾಕ್ಡೌನ್ ಮುಂದುವರಿಸುವುದು ಕಷ್ಟ. ಜೀವ ಮತ್ತು ಜೀವನ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಸರ್ಕಾರ ತನ್ನ ಎಲ್ಲಾ ಜವಾಬ್ದಾರಿ ಮಾಡಿದೆ. ಈಗ ಜನತೆ ತಮ್ಮ ಜವಾಬ್ದಾರಿ ಎಂದು ತಿಳಿದು ಕೊರೊನಾ ನಿರ್ಮೂಲನೆಗೆ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಡಾ. ಮಂಜುನಾಥ್ ಸಂದರ್ಶನದಲ್ಲಿ ತಿಳಿಸಿದರು.