ಒಳಮೀಸಲಾತಿ ಜಾರಿ, 6ರಂದು ಹುಬ್ಬಳ್ಳಿಯಲ್ಲಿ ಅಭಿನಂದನಾ ಕಾರ್ಯಕ್ರಮ: ಎ.ನಾರಾಯಣಸ್ವಾಮಿ ಬೆಂಗಳೂರು:ರಾಜ್ಯದ ಬಿಜೆಪಿ ಸರ್ಕಾರವು ಮೀಸಲಾತಿ ಜಾರಿ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ರಾಜ್ಯದ ಪರಿಶಿಷ್ಟ ಜಾತಿ ಸಮುದಾಯಗಳು ವಿಶೇಷವಾಗಿ ಸ್ವಾಗತಿಸಿವೆ. ಈ ಸಂಬಂಧ ಏಪ್ರಿಲ್ 6 ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರನ್ನು ಸಮುದಾಯಗಳ ಒಕ್ಕೂಟ ಅಭಿನಂದಿಸಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರದ ಕ್ರಮವನ್ನು ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳು ಸ್ವಾಗತ ಮಾಡಿವೆ. ಇದೇ ಕಾರ್ಯಕ್ರಮದಲ್ಲಿ ಸಿಎಂ ಅವರಲ್ಲದೇ, ಮಂತ್ರಿಮಂಡಲದ ಸದಸ್ಯರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕ್ಯಾಬಿನೆಟ್ ಉಪ ಸಮಿತಿಯ ಮಾಧುಸ್ವಾಮಿ ಸಮಿತಿ ಸದಸ್ಯರನ್ನೂ ಅಭಿನಂದಿಸಲಾಗುತ್ತದೆ. ರಾಜ್ಯದ ವಿವಿಧ ಮೋರ್ಚಾಗಳ, ಎಲ್ಲ ವರ್ಗಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕೆಂದು ಅವರು ವಿನಂತಿಸಿದರು.
ಹಲವು ದಶಕಗಳ ಹೋರಾಟಕ್ಕೆ ಸಿಕ್ಕಿದ ಗೆಲುವು ಇದಾಗಿದೆ. ಸಾಮಾಜಿಕ ನ್ಯಾಯದ ಪರವಾಗಿ ನಮ್ಮ ಸರ್ಕಾರ ಇದೆ. ಒಳ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಅನುಮತಿಗಾಗಿ ಕಳುಹಿಸಲಾಗಿದೆ. ಇದನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ಅವರು ಮನವಿ ಮಾಡಿದರು. ಒಳ ಮೀಸಲಾತಿ ಸಂಬಂಧ ಕೆಲವೆಡೆ ಇರುವ ಗೊಂದಲಗಳನ್ನು ನಿವಾರಿಸಲಾಗುತ್ತಿದೆ. ಬಂಜಾರ, ಬೋವಿ ಮತ್ತಿತರ ಸಮಾಜಗಳನ್ನು ಪರಿಶಿಷ್ಟ ಪಟ್ಟಿಯಿಂದ ಹೊರತೆಗೆಯಬೇಕೇ ಎಂದು ಕೇಳಿ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಷ್ಟ್ರೀಯ ಆಯೋಗವು ಪತ್ರ ಬರೆದಿತ್ತು. ಆದರೆ, ಕಾಂಗ್ರೆಸ್‍ನವರು ಉತ್ತರ ಕೊಡದೆ ಈ ಕಡತವನ್ನು ಮೂಲೆಗುಂಪು ಮಾಡಿದ್ದರು. ಬಿಜೆಪಿ ಸರ್ಕಾರ ಈ ಸಮಾಜವನ್ನು ಮೀಸಲಾತಿಯಿಂದ ಕೈಬಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಷ್ಟ್ರೀಯ ಆಯೋಗಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರೂ ಈ ವಿಚಾರವನ್ನು ಬೆಂಬಲಿಸಿ ಮೀಸಲಾತಿ ಮುಂದುವರಿಸುವ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ಅವರ ನಿರ್ಣಯವನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ 7 ವರ್ಷಗಳ ಕಾಲ ಒಂದೇ ಒಂದು ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಲಿಲ್ಲ. ಗೆಜೆಟ್ ಅಧಿಸೂಚನೆ ಹೊರಡಿಸಲಿಲ್ಲ ಎಂದು ಟೀಕಿಸಿದರು.
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಗಳ ಸೂಚನೆಯಂತೆ ಕಂದಾಯ ಸಚಿವರು ಗುಲ್ಬರ್ಗದಲ್ಲಿ 50 ಸಾವಿರಕ್ಕೂ ಹೆಚ್ಚು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ್ದಾರೆ. ಗೆಜೆಟ್ ಅಧಿಸೂಚನೆ ಹೊರಡಿಸಿ ಹಕ್ಕುಪತ್ರ ನೀಡಿದ ದಾಖಲೆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತಿತರ ಕಡೆ ಕಂದಾಯ ಗ್ರಾಮ ಪರಿವರ್ತನೆ ಮಾಡಿ ಮತ್ತು ಇಂಥ ಹಕ್ಕುಪತ್ರ ನೀಡುವ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲು ಕಂದಾಯ ಸಚಿವ ಆರ್.ಅಶೋಕ್ ಅವರು ಉದ್ದೇಶಿಸಿದ್ದರು. ಚುನಾವಣೆ ಘೋಷಿಸಿದ್ದರಿಂದ ಶಾಸಕರೇ ಹಕ್ಕುಪತ್ರ ನೀಡಲಿದ್ದಾರೆ. ಬಂಜಾರ, ಬೋವಿ ಸಮುದಾಯದ ತಾಂಡಾಗಳ ಬಂಧುಗಳಿಗೆ ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ 2 ಲಕ್ಷ ಹಕ್ಕುಪತ್ರ ವಿತರಣೆ ನಡೆಯಲಿದೆ.
ತಿದ್ದುಪಡಿ ಮಾಡಬೇಕೆಂದು ಹೇಳುವ ಸಿದ್ದರಾಮಯ್ಯ ಆಗ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ಸದಾಶಿವ ಆಯೋಗ ರಚಿಸಿದ್ದೇ ಕಾಂಗ್ರೆಸ್ ಪಕ್ಷ. ಆಗ ಈ ವಿಷಯ ಗೊತ್ತಿರಲಿಲ್ಲವೇ ಎಂದು ಕೇಳಿದರು. ಸುಮ್ಮನೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಸಂವಿಧಾನದಡಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡದಿರಿ ಎಂದು ನಾರಾಯಾಣ ಸ್ವಾಮಿ ತಿಳಿಸಿದರು.
ಇದನ್ನೂ ಓದಿ:ಶಿವಮೊಗ್ಗ: ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ