ಬೆಂಗಳೂರು : ಬಹುಕೋಟಿ ರೂಪಾಯಿಗಳ ಐಎಂಎ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ಶುಕ್ರವಾರ ರದ್ದುಪಡಿಸಿ ಆದೇಶ ನೀಡಿದೆ. ಇದರಿಂದಾಗಿ ಬಹುಕೋಟಿ ಹಗರಣದಲ್ಲಿ ಸಿಲುಕಿದ್ದ ಹಿಲೋರಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ತನ್ನ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಅಜಯ್ ಹಿಲೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ತಿರ್ಪುನ್ನು ಕಾಯ್ದಿರಿಸಿದ್ದು, ಶುಕ್ರವಾರ ಪ್ರಕಟಿಸಿತು. ಅರ್ಜಿದಾರರನ್ನು ಈಗಾಗಲೇ ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಪ್ರಕರಣ ರದ್ದು ಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ವಿವರವಾದ ಆದೇಶ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಅರ್ಜಿದಾರರು 2020ರ ಸೆ.9ರಂದು ತಮ್ಮ ವಿರುದ್ಧ ವಿಚಾರಣೆಗೆ ಸರ್ಕಾರ ಪೂರ್ವಾನುಮತಿ ನೀಡಿದ್ದನ್ನು ಮತ್ತು 2020ರ ಜ.7ರಂದು ಸಿಬಿಐ ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದ ಹಿನ್ನೆಲೆ ಏನು?:ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಅಜಯ್ ಹಿಲೋರಿ 2017ರ ಮೇ 16ರಂದು ಐಎಂಎ ಪ್ರಕರಣದ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ಅದರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಡೆಸಿರುವ ತನಿಖೆಯ ವರದಿಯನ್ನು ಆಧರಿಸಿ ಐಎಂಎ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಅವರು ಶಿಫಾರಸು ಮಾಡಿದ್ದರು.
ಐಎಂಎ ನಿಯಮದ ಪ್ರಕಾರ ವ್ಯಾಪಾರ ವಹಿವಾಟು ನಡೆಸಿದೆ ಮತ್ತು ಈ ವಿಚಾರದಲ್ಲಿ ಆಯುಕ್ತರೇ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದೆಂದು ಹೇಳಿದ್ದರೆಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿತ್ತು. ಅದನ್ನು ಆಧರಿಸಿ ಸಿಬಿಐ ಅಜಯ್ ಹಿಲೋರಿ ಅವರ ಹೆಸರನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸೇರಿಸಿ, ಐಪಿಸಿ, ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ವಿವಿಧ ಸೆಕ್ಷನ್‌ಗಳಲ್ಲಿ ಆರೋಪ ಮಾಡಿತ್ತು.
ಓದಿ:ಐಎಂಎ ಪ್ರಕರಣ ನ್ಯಾಯಲಯದಲ್ಲಿದೆ; ಕೇಸ್ ಇದ್ರೆ ಅದನ್ನ ಮುಚ್ಚಿಹಾಕೋಕೆ ಆಗಲ್ಲ: ಬಿಜೆಪಿ ಅಭ್ಯರ್ಥಿ ಎಲ್ ಸಿ ನಾಗರಾಜ್
ಬಹುಕೋಟಿ ರೂಪಾಯಿಗಳ ಐಎಂಎ ಹಗರಣ:ಬೆಂಗಳೂರು ಮೂಲದ ಐಎಂಎ ಮತ್ತು ಅದರ ಗುಂಪು ಸಂಸ್ಥೆಗಳು ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡು 4000 ಕೋಟಿ ರೂಪಾಯಿ ವಂಚಿಸಿತ್ತು. ಈ ಪ್ರಕರಣದಲ್ಲಿ ರಾಜಕೀಯ ನಾಯಕರು ಸಿಲುಕಿದ್ದರು. ಹಿರಿಯ ಐಪಿಎಸ್ ಅಧಿಕಾರಿಗಳೂ ವಿಚಾರಣೆಯನ್ನು ಎದುರಿಸಿದ್ದರು.
ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಹಿರಿಯ ಐಎಎಸ್ ಆಫೀಸರ್ ವಿಜಯ್ ಶಂಕರ್ ಕಿಕ್ಬ್ಯಾಕ್ ಆರೋಪದಡಿ ಜೈಲು ಸೇರಿದ್ದರು. ವಿಚಾರಣೆ ಹಂತದಲ್ಲಿರುವಾಗಲೇ ವಿಜಯ್ ಶಂಕರ್ ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ ಸಿಬಿಐ ಚಾರ್ಜ್‌ಶೀಟ್ ರದ್ದಾಗಿತ್ತು. ರೋಷನ್ ಬೇಗ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಅವರ ಆಸ್ತಿ ಜಪ್ತಿಯೂ ಮಾಡಲಾಗಿತ್ತು.