ಕರ್ನಾಟಕ

karnataka

ETV Bharat / state

ತಪ್ಪು ಸಾಬೀತಾದರೆ ಹುದ್ದೆ ತೊರೆಯುತ್ತೇನೆ: ಷಡಕ್ಷರಿ ಪ್ರತಿಕ್ರಿಯೆ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಅವರು ವರ್ಗಾವಣೆ ಹಾಗೂ ತಮ್ಮ ಮೇಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಸರ್ಕಾರ, ಪಕ್ಷದ ಪರವಾಗಿಲ್ಲ. ನೌಕರರ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದನ್ನ ಸಂಘವು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ

By ETV Bharat Karnataka Team

Published : Nov 8, 2023, 5:30 PM IST

Updated : Nov 9, 2023, 8:47 PM IST

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ

ಬೆಂಗಳೂರು :ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ತಮ್ಮ ವರ್ಗಾವಣೆ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ವರ್ಗಾವಣೆ ಹಾಗೂ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

’’ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ಅಧಿಕೃತ ದಾಖಲಾತಿ ತೋರಿಸಲಿ. ಒಂದೊಮ್ಮೆ ತಪ್ಪು ಎಸಗಿರುವುದು ಸಾಬೀತಾದರೆ ಹುದ್ದೆಯನ್ನೇ ತೊರೆಯುತ್ತೇನೆ ಎಂದು ಸವಾಲು ಕೂಡಾ ಹಾಕಿದ್ದಾರೆ. ಈ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿ ಅವರನ್ನ ಭೇಟಿಯಾಗಿ ಮಾತನಾಡುತ್ತೇನೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಮುಂಗಡಗಳು ವಿಭಾಗ) ಆದೇಶಿಸಿದ್ದರು. ಸರ್ಕಾರದ ಈ ಆದೇಶ ಹೊರ ಬೀಳುತ್ತಿದ್ದಂತೆ ಬೆನ್ನಲ್ಲೇ ಪರ-ವಿರೋಧ ಬಗ್ಗೆ ಚರ್ಚೆಯಾಗುತ್ತಿದೆ.‌

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಅಲ್ಲಿನ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ‌. ವರದಿಯಲ್ಲಿ ನನ್ನ ಹೆಸರಿಲ್ಲ. ಹಗರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ ಮೇಲೆ ಸತ್ಯಾಸತ್ಯತೆ ಹೊರ ಬರಲಿದೆ ಎಂದರು.

ವರ್ಗಾವಣೆಗೆ ಇಂತಹದ್ದೇ ಕಾರಣ ಎಂದು ಗೊತ್ತಾಗಿಲ್ಲ:ನಿರ್ದಿಷ್ಟವಾಗಿ ಇಂತಹದ್ದೇ ಕಾರಣಕ್ಕೆ ವರ್ಗಾವಣೆಯಾಗಿದೆ ಎಂದು ಗೊತ್ತಾಗಿಲ್ಲ. ಆದರೆ ಇದರ ಹಿಂದೆ ಬೇರೆ ಉದ್ದೇಶ ಅಡಗಿದೆ ಎಂಬುದು ಮೇಲ್ನೊಟಕ್ಕೆ ಸ್ಪಷ್ಟವಾಗಿದೆ‌. ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷನಾಗಿದ್ದು, 6 ಲಕ್ಷ ನೌಕರರ ಬೇಡಿಕೆ - ಸಮಸ್ಯೆ ಕೇಳುವುದು ನನ್ನ ಕಾಯಕವಾಗಿದೆ. ಆದರೆ, ಏಕಾ ಏಕಿ ಅಧ್ಯಕ್ಷ ಸ್ಥಾನದಲ್ಲಿ ಇರುವವರನ್ನ ಸರ್ಕಾರ ವರ್ಗಾವಣೆ ಮಾಡಿದೆ. ಕೋಲಾರದ ಬದಲು ಬೆಂಗಳೂರಿಗೆ ಡೆಪ್ಯೂಟೇಷನ್ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಷಡಕ್ಷರಿ ಹೇಳಿದ್ದಾರೆ.

’ನಾನು ಯಾವುದೇ ಪಕ್ಷದ ಪರ ಅಲ್ಲ’:ಒಂದೇ‌ ಪಕ್ಷದ ಪರ ಗುರುತಿಸಿಕೊಂಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಷಡಕ್ಷರಿ, ಯಾವುದೇ ಸರ್ಕಾರ, ಪಕ್ಷದ ಪರವಾಗಿಲ್ಲ. ನೌಕರರ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದನ್ನ ಸಂಘವು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ. ಹಿಂದಿನ ಸರ್ಕಾರವಿದ್ದಾಗ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಮುಷ್ಕರಕ್ಕೆ ಸಂಘದಿಂದ ಕರೆ ಕೊಡಲಾಗಿತ್ತು. ಒಂದೇ ಪಕ್ಷದ ಪರ ನನ್ನ ಧೋರಣೆ ಇದ್ದಿದ್ದರೆ ನಾನೇಕೆ ಮುಷ್ಕರ ಮಾಡುತ್ತಿದ್ದೆ? ಎಂದು ಅವರು ಪ್ರಶ್ನಿಸಿದ್ದಾರೆ.

ನಾನು ಸರ್ಕಾರಿ ನೌಕರರ ಪರ ಏಜೆಂಟ್ : 7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಸರ್ಕಾರ ವಿಸ್ತರಣೆ ಮಾಡಿದೆ‌.‌ ಈ ಬಗ್ಗೆ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ರಾಜ್ಯದ 224 ಶಾಸಕರು ನಮ್ಮ ಸ್ನೇಹಿತರು, ಹಿತೈಷಿಗಳಾಗಿದ್ದಾರೆ. ಪ್ರೀತಿ-ವಿಶ್ವಾಸದಿಂದ ಇರುತ್ತೇವೆಯೇ ಹೊರತು ಯಾರೋ ಶಾಸಕರ ಜೊತೆಗೆ ಗುರುತಿಸಿಕೊಂಡಿದ್ದರೆ, ಆಯಾ ಪಕ್ಷದ ಅಥವಾ ಸರ್ಕಾರದ ಪರ ಎಂದು ಅರ್ಥವಲ್ಲ. ನಾನು ಯಾವುದೇ ಪಕ್ಷದ ಏಜೆಂಟ್ ಅಲ್ಲ‌. ಸರ್ಕಾರಿ ನೌಕರರ ಪರ ಏಜೆಂಟ್ ಆಗಿದ್ದೇನೆ ಎಂದು ಷಡಕ್ಷರಿ ಅವರು ಸ್ಪಷ್ಟಪಡಿಸಿದರು.

ಕಳೆದ 18 ವರ್ಷಗಳಿಂದ ಸಂಘದಲ್ಲಿ ಕ್ರಿಯಾಶೀಲನಾಗಿದ್ದೇನೆ‌. ಯಾವುದೇ ಸರ್ಕಾರಕ್ಕೂ ನಾನು ಬ್ರ್ಯಾಂಡ್ ಆಗಿಲ್ಲ.‌ ಒಂದು ವೇಳೆ ಬ್ರ್ಯಾಂಡ್ ಆಗಿದ್ದರೆ ಅಧ್ಯಕ್ಷ ಸ್ಥಾನದಲ್ಲಿ‌‌ ಇರುತ್ತಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಮೌಲ್ಯ ಹಾಗೂ ಘನತೆಯಿದೆ. ನಿಗದಿತ ಚೌಕಟ್ಟಿನಲ್ಲಿ‌ ನಾನು ಕಾರ್ಯನಿರ್ವಹಿಸುತ್ತೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.‌

ಇದನ್ನೂ ಓದಿ :ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಎತ್ತಂಗಡಿ, ಕೋಲಾರಕ್ಕೆ ವರ್ಗ

Last Updated : Nov 9, 2023, 8:47 PM IST

ABOUT THE AUTHOR

...view details