ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ವಿಮೆ ಹೆಚ್ಚಿಸುವ ಕುರಿತು ಪರಿಶೀಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ಕೊರೊನಾ ವಾರಿಯರ್ಸ್​ಗೆ ವಿಮೆ

ಕೇಂದ್ರ ಸರ್ಕಾರದ ಯೋಜನೆ ವ್ಯಾಪ್ತಿಗೆ ಒಳಪಡುವವರು ನಿಭಾಯಿಸುವ ಹೊಣೆಗಾರಿಕೆಯನ್ನೇ ರಾಜ್ಯ ಸರ್ಕಾರದ ವ್ಯಾಪ್ತಿಯ ಸಿಬ್ಬಂದಿಯೂ ನಿರ್ವಹಿಸುತ್ತಾರೆ. ಒಂದೇ ರೀತಿಯ ಕೆಲಸಕ್ಕೆ ಬೇರೆ ಬೇರೆ ರೀತಿಯ ವಿಮಾ ಸೌಲಭ್ಯವೇಕೆ ಎಂದು ಸರ್ಕಾರವನ್ನು ಹೈಕೋರ್ಟ್​ ಪ್ರಶ್ನಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Aug 4, 2020, 9:47 PM IST

ಬೆಂಗಳೂರು:ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಸೇರಿ ಕೋವಿಡ್-19 ಕರ್ತವ್ಯದಲ್ಲಿ ತೊಡಗಿರುವ ಮುಂಚೂಣಿ ಸಿಬ್ಬಂದಿಗೆ ನಿಗದಿಪಡಿಸಿರುವ 30 ಲಕ್ಷ ರೂಪಾಯಿ ವಿಮೆ ಪರಿಹಾರ ಮೊತ್ತವನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮಾದರಿಯಲ್ಲಿ 50 ಲಕ್ಷಕ್ಕೆ ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕೋವಿಡ್-19 ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಮುಂಚೂಣಿ ಸಿಬ್ಬಂದಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಆ ಯೋಜನೆ ವ್ಯಾಪ್ತಿಗೆ ಒಳಪಡದವರಿಗೆ 30 ಲಕ್ಷ ರೂ. ವಿಮೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೇ, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಹೋಂಗಾರ್ಡ್ಸ್, ಅಗ್ನಿಶಾಮಕ ಸಿಬ್ಬಂದಿ, ಕಾರಾಗೃಹ ಸಿಬ್ಬಂದಿ, ಪೌರಕಾಮಿರ್ಕರು ಸೇರಿ ಎಲ್ಲ ಕೊರೊನಾ ವಾರಿಯರ್ಸ್​ಗಳನ್ನು ರಾಜ್ಯ ಸರ್ಕಾರದ ವಿಮಾ ಸೌಲಭ್ಯದ ವ್ಯಾಪ್ತಿಗೆ ತರಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೇಂದ್ರ ಸರ್ಕಾರದ ಯೋಜನೆ ವ್ಯಾಪ್ತಿಗೆ ಒಳಪಡುವವರು ನಿಭಾಯಿಸುವ ಹೊಣೆಗಾರಿಕೆಯನ್ನೇ ರಾಜ್ಯ ಸರ್ಕಾರದ ವ್ಯಾಪ್ತಿಯ ಸಿಬ್ಬಂದಿಯೂ ನಿರ್ವಹಿಸುತ್ತಾರೆ. ಒಂದೇ ರೀತಿಯ ಕೆಲಸಕ್ಕೆ ಬೇರೆ ಬೇರೆ ರೀತಿಯ ವಿಮಾ ಸೌಲಭ್ಯವೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿತು. ಹಾಗೆಯೇ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 50 ಲಕ್ಷ ರೂ. ವಿಮೆ ವ್ಯಾಪ್ತಿಗೆ ಒಳಪಡದ ಹಾಗೂ ರಾಜ್ಯ ಸರ್ಕಾರದ 30 ಲಕ್ಷ ರೂ. ವಿಮೆ ವ್ಯಾಪ್ತಿ ಒಳಗೊಳ್ಳುವ ಸಿಬ್ಬಂದಿಯ ವಿಮೆ ಮಿತಿಯನ್ನು 50 ಲಕ್ಷ ರೂ. ಗೆ ಏರಿಕೆ ಮಾಡುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details