ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಅಶ್ವಥ್ ನಾರಾಯಣ ವಿರುದ್ಧದ ತನಿಖೆಗೆ ಹೈಕೋರ್ಟ್​ ತಡೆ - ಈಟಿವಿ ಭಾರತ ಕನ್ನಡ

ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಅಶ್ವತ್ಥನಾರಾಯಣ ನೀಡಿದ್ದ ಹೇಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್​ ನಾಲ್ಕು ವಾರ ತಡೆ ನೀಡಿದೆ.

ಅಶ್ವಥ್ ನಾರಾಯಣ ವಿರುದ್ಧದ ತನಿಖೆಗೆ ​ ತಡೆ
ಅಶ್ವಥ್ ನಾರಾಯಣ ವಿರುದ್ಧದ ತನಿಖೆಗೆ ​ ತಡೆ

By

Published : May 30, 2023, 1:46 PM IST

ಬೆಂಗಳೂರು: ಮಂಡ್ಯದ ಸಾತನೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯರನ್ನು ಮುಗಿಸಲು ಕರೆ ನೀಡಿದ್ದ ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ವಿರುದ್ದದ ತನಿಖೆಗೆ ಹೈಕೋರ್ಟ್ ನಾಲ್ಕು ವಾರಗಳ ಕಾಲ ತಡೆ ನೀಡಿದೆ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ಆರೋಪ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಮಾಜಿ ಸಚಿವ, ಮಲ್ಲೇಶ್ವರ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ‌ ಈ ಆದೇಶ ನೀಡಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ, ಇದೇ ಆರೋಪ ಸಂಬಂಧ ಫೆಬ್ರವರಿ ತಿಂಗಳ ದೂರು ದಾಖಲಾಗಿತ್ತು. ಇದರ ತನಿಖೆ ನಡೆಸಿದ್ದ ಪೊಲೀಸರು ಎನ್​ಸಿಆರ್ ದಾಖಲಿಸಿದ್ದರು. ಸರ್ಕಾರ ಬದಲಾದ ನಂತರ ಹೊಸ ದೂರು ನೀಡಲಾಗಿದೆ. ದುರುದ್ದೇಶಪೂರ್ವಕವಾಗಿ ಎಫ್ಐಆರ್ ದಾಖಲಿಸಲಾಗಿದೆ. ಚುನಾವಣೆಯಲ್ಲಿ ಸೋಲಿಸಬೇಕೆಂದು ಈ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಹೀಗಾಗಿ ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು.

ಅರ್ಜಿದಾರ ಅಶ್ವಥ್ ನಾರಾಯಣ್ ವಿರುದ್ದ ದಾಖಲಾಗಿರು ಪ್ರಕರಣ ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ದವಾಗಿದ್ದು, ಕಾನೂನು ಬಾಹಿರವಾಗಿ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಕ್ರಿಮಿನಲ್ ಬೆದರಿಕೆ, ದಂಗೆ ಉಂಟು ಮಾಡುವುದು, ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿರುವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದಕ್ಕೆ ಸೂಕ್ತ ಪುರಾವೆಗಳು ಇಲ್ಲವಾಗಿದೆ.

ಅಲ್ಲದೆ, ದೂರುದಾರರು ಘಟನಾ ಸ್ಥಳದಲ್ಲಿ ಇರಲಿಲ್ಲ. ಅರ್ಜಿದಾರರ ಭಾಷಣದಿಂದ ಈವರೆಗೂ ಯಾವುದೇ ಗಲಭೆ ನಡೆದಿಲ್ಲ. ಅಲ್ಲದೆ, ಅರ್ಜಿದಾರರ ಹೇಳಿಕೆಯಿಂದ ಯಾವ ವ್ಯಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂಬುದನ್ನು ಸ್ಪಷ್ಟ ಪಡಿಸಿಲ್ಲ. ಈ ದೂರು ಒಂದು ಕಾಲ್ಪನಿಕವಾಗಿದೆ. ಅರ್ಜಿದಾರರು ಈ ಹೇಳಿಕೆ ನೀಡುವುದಕ್ಕೂ ಮುನ್ನ ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವುದನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಜತೆಗೆ ಅರ್ಜಿದಾರರ ಹೇಳಿಕೆ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಸಿದ್ದರಾಮಯ್ಯ ವಿರುದ್ಧ ಪ್ರಚೋದನೆ ನೀಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

ಅರ್ಜಿದಾರರು ಕಳೆದ ಎರಡು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು, ಸಮಾಜದ ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ಹೇಳಿಕೆ ನೀಡಿಲ್ಲ. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಘನತೆಗೆ ದಕ್ಕೆಯಾಗುವಂತೆ ಮಾಡುವುದಕ್ಕಾಗಿ ದೂರು ದಾಖಲಿಸಲಾಗಿದೆ. ಸಿದ್ದರಾಮಯ್ಯ ಅವರ ಕುರಿತು ಗೌರವವಿದ್ದು, ಅವರ ಮತ್ತು ನನ್ನ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ. ಆದರೆ, ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಇದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಬೇಕು ಎಂಬ ರೀತಿಯಲ್ಲಿ ಹೇಳಿದ್ದೇನೆ. ಅವರ ವಿರುದ್ದ ಪ್ರಚೋದನೆ ನೀಡುವ ಉದ್ದೇಶವಿಲ್ಲ ಎಂದು ಮಾಧ್ಯಮಗಳು ಮತ್ತು ವಿಧಾನ ಮಂಡಲ ಅಧಿವೇಶನದಲ್ಲಿ ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಅರ್ಜಿದಾರರಿಗೆ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ದೂರು ನೀಡಿದ್ದು ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ:2023ರ ಫೆಬ್ರವರಿ 15 ರಂದು ಬಿಜೆಪಿ ಸಚಿವರಾಗಿದ್ದ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಮಂಡ್ಯದ ಸಾತನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉರಿಗೌಡ-ನಂಜೆಗೌಡ ಟಿಪ್ಪುವನ್ನು ಕೊಂದಿದ್ದರು. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕರೆ ನೀಡಿದ್ದರು. ಈ ಸಂಬಂಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮೇ 24 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ:ಸರ್ಕಾರಿ ಶಾಲೆಗಳಲ್ಲಿ ನೀರು, ಶೌಚಾಲಯ ಏಕಿಲ್ಲ?: ಹೈಕೋರ್ಟ್ ತರಾಟೆ

ABOUT THE AUTHOR

...view details