ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಎಚ್‌ಎಸ್‌ಆರ್‌ಪಿ ಉತ್ಪಾದಕರನ್ನು ಅಂತಿಮಗೊಳಿಸಲು ಕಾಲಮಿತಿ ನಿಗದಿ ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಆದೇಶಿಸಿದೆ. 2019ರ ಏಪ್ರಿಲ್ 1ಕ್ಕಿಂತ ಮುನ್ನ ನೋಂದಣಿ ಆಗಿರುವ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ತಡೆ ನೀಡುವಂತೆ ಕೋರಿ ಭಾರತೀಯ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಉತ್ಪಾದಕರ ಒಕ್ಕೂಟ ಸೇರಿ ಕೆಲ ಸಂಸ್ಥೆಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಆದರೆ, ವಾಹನ ಉತ್ಪಾದಕರು ಪ್ರತಿಯೊಂದು ಲೈಸೆನ್ಸ್ ಪ್ಲೇಟ್ ಉತ್ಪಾದಕರಿಗೆ ಟೈಪ್ ಅಪ್ರೋವಲ್ ಸರ್ಟಿಫಿಕೇಟ್ (ಟಿಎಸಿ) ಪಡೆದುಕೊಳ್ಳಲು ಅಂತಿಮ ಪ್ರಕ್ರಿಯೆಯನ್ನು ಕೈಗೊಳ್ಳಬಹುದು ಎಂದು ಪೀಠ ತಿಳಿಸಿದೆ. ಜೊತೆಗೆ ರಾಜ್ಯ ಸರ್ಕಾರ ಕಾಲಮಿತಿಯಲ್ಲಿ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿಆರ್‌ಆರ್‌ಐ) ವಿತರಿಸಿರುವ ಟೈಪ್ ಅಪ್ರೋವಲ್ ಸರ್ಟಿಫಿಕೇಟ್ (ಟಿಎಸಿ) ಹೊಂದಿರುವ ಪರವಾನಗಿ ಪಡೆದ ಪ್ಲೇಟ್ ಉತ್ಪಾದಕರಿಗೆ ಅನುಮೋದನೆ ನೀಡುವ ಬಗ್ಗೆ ಪ್ರಕ್ರಿಯೆ ನಡೆಸಬಹುದು ಎಂದು ಆದೇಶಿಸಿದೆ.