ಬೆಂಗಳೂರು: ಕಾನೂನಿನ ಕುರಿತು ಅರಿವಿಲ್ಲದಿದ್ದರೆ ಕ್ಷಮೆ ಇರುವುದಿಲ್ಲ ಎಂದಿರುವ ಹೈಕೋರ್ಟ್, ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರದ ಮಾಜಿ ಕಾರ್ಯದರ್ಶಿ ಡಾ.ಎಸ್. ಸಿದ್ದಯ್ಯ ವಿರುದ್ಧ ಅಕ್ರಮವಾಗಿ ಧಾರ್ಮಿಕ ಕೇಂದ್ರದ ವಿಳಾಸ ನೀಡಿ ಪಿಸ್ತೂಲ್ ಹೊಂದಿದ್ದ ಆರೋಪದದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ. ಡಾ.ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಅರ್ಜಿದಾರರು ತಮಗೆ ಧಾರ್ಮಿಕ ಕೇಂದ್ರಗಳ (ದುರ್ಬಳಕೆ ತಡೆ) ಕಾಯಿದೆ 1988ರ ಸೆಕ್ಷನ್ 3 ಮತ್ತು 4ರ ಬಗ್ಗೆ ಅರಿವಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಧಾರ್ಮಿಕ ಕೇಂದ್ರದ ವಿಳಾಸ ನೀಡಿ ಪೊಲೀಸರಿಂದ ಪಿಸ್ತೂಲ್ ಲೈಸನ್ಸ್ ಪಡೆದಿದ್ದಾರೆ. ಆದರೆ, ಕಾಯಿದೆಯ ಪ್ರಕಾರ ಧಾರ್ಮಿಕ ಕೇಂದ್ರದಲ್ಲಿ ಪಿಸ್ತೂಲ್ ಹೊಂದುವುದು ನಿಷಿದ್ಧ, ಹಾಗೆ ನಿಯಮ ಉಲ್ಲಂಘಿಸಿದರೆ ಸೆಕ್ಷನ್ 7ರ ಪ್ರಕಾರ ಗಂಭೀರ ಅಪರಾಧವಾಗುತ್ತದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರು ಕೇಂದ್ರದ ನಿರ್ವಾಹಕರೂ ಕೂಡ ಹೌದು. ಅವರು ಯಾವುದೇ ವ್ಯಕ್ತಿ ಕೇಂದ್ರದೊಳಗೆ ಶಸ್ತ್ರಾಸ್ತ್ರಗಳನ್ನು ತರಲು ಬಿಟ್ಟುಬಿಡುತ್ತಾರೆಯೇ?. ಏಕೆಂದರೆ ಧಾರ್ಮಿಕ ಕೇಂದ್ರಗಳ ಒಳಗೆ ಆಯುಧಗಳನ್ನು ಕೊಂಡೊಯ್ಯುವುದು ನಿಷಿದ್ಧವಾಗಿದೆ. ಹಾಗಾಗಿ ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು?:ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಶ್ರೀತರಳಬಾಳು ಕೇಂದ್ರ ಜಗದ್ಗುರು ಬೃಹತ್ ಮಠವಿದೆ. ಅದರಡಿಯಲ್ಲಿ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ತರಳಬಾಳು ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಅರ್ಜಿದಾರ ಡಾ.ಸಿದ್ದಯ್ಯ ಆ ಕೇಂದ್ರದಲ್ಲಿ 2004ರಿಂದ 2021ರವರೆಗೆ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕೆಲ ದಿನಗಳ ಬಳಿಕ ಆ ಕಾರ್ಯದರ್ಶಿ ಹುದ್ದೆಯನ್ನು ಹೊಸಬರು ವಹಿಸಿಕೊಂಡಿದ್ದರು. ಅವರಿಗೆ ಹಿಂದೆ ಕೇಂದ್ರದ ಕಾರ್ಯದರ್ಶಿಯಾಗಿದ್ದವರು, 2017ರಲ್ಲಿ ತರಳಬಾಳು ಕೇಂದ್ರದ ವಿಳಾಸ ನೀಡಿ ಪಿಸ್ತೂಲ್ ಲೈಸನ್ಸ್ ಪಡೆದು, ಆ ಪಿಸ್ತೂಲ್ ಅನ್ನು ಮಠದ ಆವರಣದಲ್ಲಿಯೇ ಇಟ್ಟಿದ್ದರು ಎಂಬ ಮಾಹಿತಿ ದೊರಕಿತ್ತು.
ಈ ಕುರಿತು ದಾಖಲಾಗಿದ್ದ ಪ್ರಕರಣದ ಬಗ್ಗೆ ಆರ್.ಟಿ. ನಗರ ಪೊಲೀಸರು ತನಿಖೆ ನಡೆಸಿದ್ದರು. ಸಿದ್ದಯ್ಯ ಅವರು ಕೇಂದ್ರದ ವಿಳಾಸ ನೀಡಿ ಪಿಸ್ತೂಲ್ ಲೈಸನ್ಸ್ ಪಡೆದು ಅದನ್ನು ಕೇಂದ್ರದ ಆವರಣದಲ್ಲಿಯೇ ಇಟ್ಟಿರುವ ಸಂಗತಿ ಬಯಲಾಗಿತ್ತು. ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಆದ್ದರಿಂದ ಅರ್ಜಿದಾರರು ಕ್ರಿಮಿನಲ್ ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಿಯಮದಂತೆ ಲೈಸನ್ಸ್ ಪಡೆದೇ ಪಿಸ್ತೂಲ್ ಇಟ್ಟುಕೊಳ್ಳಲಾಗಿತ್ತು. ಲೈಸನ್ಸ್ಗೆ ಕೇಂದ್ರದ ವಿಳಾಸ ನೀಡಲಾಗಿತ್ತು. ಪೊಲೀಸರು ಪರಿಶೀಲನೆ ನಂತರವೇ ಪರವಾನಗಿ ನೀಡಿದ್ದಾರೆ. ಜತೆಗೆ ಕರ್ನಾಟಕದಲ್ಲಿ ಇತರೆ ಮಠಾಧೀಶರು ಸಹ ಪಿಸ್ತೂಲ್ ಹೊಂದಿದ್ದಾರೆ. ಅಂತೆಯೇ ಕಾನೂನು ಬದ್ಧವಾಗಿಯೇ ಅರ್ಜಿದಾರರು ಪಿಸ್ತೂಲ್ ಹೊಂದಿದ್ದರು. ಇದರಲ್ಲಿ ಅರ್ಜಿದಾರರ ತಪ್ಪೇನೂ ಇಲ್ಲ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿದ್ದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ದದ ಪಿತೂರಿ ಆರೋಪ: ಬಸವರಾಜನ್, ಸೌಭಾಗ್ಯ ಪ್ರಕರಣ ರದ್ದುಪಡಿಸಿದ ಹೈಕೋರ್ಟ್